ಉಡುಪಿ/ಚಿಕ್ಕಮಗಳೂರು, ಫೆ 07 (DaijiworldNews/AA): ನಕ್ಸಲರ ಚಟುವಟಿಕೆ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಮತ್ತೆ ಪ್ರಾರಂಭವಾಗಿದೆ. ಇವೆರಡು ಜಿಲ್ಲೆಯಲ್ಲಿ ಓಡಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಈ ಜಿಲ್ಲೆಗಳ ಕೆಲ ಭಾಗಗಳಲ್ಲಿ 5 ದಿನ ಹೈ ಅಲರ್ಟ್ ಘೋಷಿಸಲಾಗಿದೆ.
ಮಲೆನಾಡು ಹಾಗೂ ಕರಾವಳಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸುವುದರೊಂದಿಗೆ ತೀವ್ರ ಕಟ್ಟೆಚ್ಚರಿಕೆ ವಹಿಸುವಂತೆ ನಕ್ಸಲ್ ನಿಗ್ರಹ ಪಡೆ (ಎಎನ್ ಎಫ್)ಗೆ ಸೂಚಿಸಲಾಗಿದೆ. ಕೇರಳದಿಂದ ನಕ್ಸಲರು ಉಡುಪಿ ಜಿಲ್ಲೆಯ ಬೈಂದೂರಿಗೆ ಆಗಮಿಸಿರುವ ಶಂಕೆ ವ್ಯಕ್ತವಾಗಿದೆ.
ನಕ್ಸಲ್ ಮುಖಂಡ ಸಾಕೇತ್ ರಾಜನ್ ಸಾವಿನ ಬಳಿಕ ವಿಕ್ರಮ್ ಗೌಡ ತಲೆಮರೆಸಿಕೊಂಡಿದ್ದ. ಇದೀಗ ನಕ್ಸಲ್ ನಾಯಕ ವಿಕ್ರಮ್ ಗೌಡ ಹಾಗೂ ಆತನ ಸಹಚರರು ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಓಡಾಟ ನಡೆಸುತ್ತಿರುವುದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಪೊಲೀಸರಿಗೆ ನಕ್ಸಲ್ ಓಡಾಟದ ಮಾಹಿತಿ ದೊರೆತ ಬೆನ್ನಲ್ಲೇ, ವರ್ಷಗಳ ಬಳಿಕ ಮತ್ತೆ ಬೈಂದೂರಿನಲ್ಲಿ ಕೂಂಬಿಂಗ್ ಆರಂಭಗೊಳ್ಳುವ ಸಾಧ್ಯತೆ ಇದೆ.
ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ಸುಮಾರು 20 ವರ್ಷಗಳ ಹಿಂದೆ ನಕ್ಸಲೈಟ್ ಆಗಿದ್ದನು. ಕೇರಳದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಡೆಸುತ್ತಿದ್ದ ಈತ ಬಿ.ಜಿ ಕೃಷ್ಣಮೂರ್ತಿ ನಂತರ ರಾಜ್ಯದ ನಕ್ಸಲ್ ನಾಯಕತ್ವವನ್ನು ವಹಿಸಿಕೊಂಡಿದ್ದಾನೆ. ಇನ್ನು ಕಳೆದ ಕಳೆದ ಒಂದು ತಿಂಗಳಿನ ಹಿಂದೆ ಕೇರಳದ ಥಂಡರ್ಕೂಲ್ ನಲ್ಲಿ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಈ ಮಧ್ಯೆ ನಕ್ಸಲರು ಕರ್ನಾಟಕವನ್ನು ಪ್ರವೇಶಿಸಿದ್ದಾರೆ ಎನ್ನಲಾಗುತ್ತಿದೆ.