ಪುಣೆ, ಫೆ 07 (DaijiworldNews/AA): ಫೆ. 27 ರಂದು ಮಹಾರಾಷ್ಟ್ರದಿಂದ ಆರು ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆಗಳು ನಡೆಯುವುದರಿಂದ ಇಂದು ಸಂಜೆ 4 ಗಂಟೆಯೊಳಗೆ "ಹೊಸ ಹೆಸರನ್ನು ಪಡೆದುಕೊಳ್ಳಲು" ಮತ್ತು "ಪಕ್ಷದ ಚಿಹ್ನೆ ಒದಗಿಸುವಂತೆ" ಶರದ್ ಪವಾರ್ ಪಕ್ಷಕ್ಕೆ ಚುನಾವಣಾ ಆಯೋಗ ಆದೇಶಿಸಿದೆ.
ಮೂಲಗಳ ಪ್ರಕಾರ ಶರದ್ ಪವಾರ್ ಅವರು ನ್ಯಾಷನಲಿಸ್ಟ್ ಮತ್ತು ಕಾಂಗ್ರೆಸ್ ಪದಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. "ಉದಯಿಸುವ ಸೂರ್ಯ", "ಚಕ್ರ" ಮತ್ತು "ಟ್ರಾಕ್ಟರ್" ಪಕ್ಷದ ಹೊಸ ಚಿಹ್ನೆಯ ಆಯ್ಕೆಗಳಲ್ಲಿ ಸೇರಿವೆ ಎಂದು ತಿಳಿಸಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ)ದ ಹೆಸರು ಹಾಗೂ ಅದರ ಚಿಹ್ನೆಯು ಶರದ್ ಪವಾರ್ ಅವರ ಸೋದರಳಿಯ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಹೋಗಲಿದೆ. ಅಜಿತ್ ಪವಾರ್ ಅವರ ಬಣವೇ ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಎಂದು ಚುನಾವಣಾ ಆಯೋಗ ಮಂಗಳವಾರ ಘೋಷಿಸಿತ್ತು. ಆಯೋಗ ಆದೇಶ ನೀಡಿದ ಬೆನ್ನಲ್ಲೇ ಶರದ್ ಪವಾರ್, ತಮ್ಮ ಬಣ ಬುಧವಾರ ಹೊಸ ಹೆಸರು ಮತ್ತು ಚಿಹ್ನೆಯನ್ನು ಪ್ರಕಟಿಸಲಿದೆ ಎಂದು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶರದ್ ಪವಾರ್ ಅವರ ಪುತ್ರಿ ಬಾರಾಮತಿ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಅವರು, ಮುಂಬರುವ ರಾಜ್ಯಸಭಾ ಚುನಾವಣೆಗೆ ಹೊಸ ಹೆಸರು ಮತ್ತು ಪಕ್ಷವನ್ನು ನಿರ್ಧರಿಸಲು ಚುನಾವಣಾ ಆಯೋಗವು ನಮ್ಮನ್ನು ಕೇಳಿದೆ. ನಾವು ಅದನ್ನು ಬುಧವಾರ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.