ರಾಯಚೂರು, ಫೆ 07(DaijiworldNews/MS): ರಾಜ್ಯದ ಬಜೆಟ್ ಅಧಿವೇಶನ ಫೆ.12ರಿಂದ 23ರವರೆಗೆ ನಡೆಯಲಿದೆ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, 16ನೇ ವಿಧಾನಸಭೆಯ 3ನೇ ಅಧಿವೇಶನದಲ್ಲಿ 12ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, 15ರವರೆಗೆ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಫೆ.16ಕ್ಕೆ ಬಜೆಟ್ ಮಂಡನೆಯಾಗಲಿದ್ದು, 23ರವರೆಗೆ ಅಧಿವೇಶನ ನಡೆಯಲಿದೆ. ಇದಕ್ಕೂ ಮೊದಲು ಎಲ್ಲ ಶಾಸಕರಿಗೆ ಬಜೆಟ್ ಬಗ್ಗೆ ಮಾಹಿತಿ ನೀಡಲು ಫೆ.9ರಂದು ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್ನಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಎಲ್ಲ ಸದಸ್ಯರು ತಪ್ಪದೆ ಭಾಗವಹಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಟ್ಟು 10 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ. ಶಾಸಕರು ಸರಿಯಾದ ಸಮಯಕ್ಕೆ ಬರುವಂತೆ ಮಾಡಲು ಬೆಳಗ್ಗೆ 9 ಗಂಟೆಗೆ ಉಚಿತ ತಿಂಡಿ ವ್ಯವಸ್ಥೆ ಮಾಡುತ್ತಿದ್ದೇವೆ. ಒಂದೊಂದು ದಿನ ಒಂದೊಂದು ಹೋಟೆಲ್ನಿಂದ ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಖಾದರ್ ತಿಳಿಸಿದ್ದಾರೆ.