ನವದೆಹಲಿ, ಫೆ 07 (DaijiworldNews/AA): ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಸಮ್ಮುಖದಲ್ಲಿ ಎಐಎಡಿಎಂಕೆಯ ಮಾಜಿ ನಾಯಕರು ಇಂದು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ ಮಾಜಿ ಎಐಎಡಿಎಂಕೆ ನಾಯಕರಲ್ಲಿ ಕೆ ವಡಿವೇಲ್, ಪಿ.ಎಸ್.ಕಂದಸಾಮಿ, ಗೋಮತಿ ಶ್ರೀನಿವಾಸನ್, ಆರ್ ಚಿನ್ನಸಾಮಿ, ಆರ್ ದುರೈಸಾಮಿ, ಎಂವಿ ರತ್ನಂ, ಎಸ್ ಎಂ ವಾಸನ್, ಎಸ್ ಮುತ್ತುಕೃಷ್ಣನ್, ಪಿಎಸ್ ಅರುಲ್, ಆರ್ ರಾಜೇಂದ್ರನ್, ಎ ಪ್ರಭು, ವಿ.ಆರ್.ಜಯರಾಮನ್, ಕೆ ಬಾಲಸುಬ್ರಮಣ್ಯಂ ಸೀರ್ಕಾಜಿ, ಎ ಚಂದ್ರಶೇಖರನ್, ಕೆ ಆರ್ ತಂಗರಸು ಅಂಡಿಮಾಡಂ ಸೇರಿದ್ದಾರೆ.
ಇವರೆಲ್ಲರೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಿನ್ನೆ ಸಂಜೆ ಅಣ್ಣಾಮಲೈ ಅವರೊಂದಿಗೆ ನವದೆಹಲಿಗೆ ಆಗಮಿಸಿದ್ದರು.
ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ತೃತೀಯ ರಂಗ ರಚನೆಗೆ ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಇದೀಗ ಇತರ ಪಕ್ಷದ ನಾಯಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷವನ್ನು ವಿಸ್ತರಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದೆ.
ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿದೆ.
ಎಐಎಡಿಎಂಕೆ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಮಾಡುವಲ್ಲಿ ಅಣ್ಣಾಮಲೈ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಒಟ್ಟಾರೆ ಈ ಬೆಳವಣಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.