ಬೆಂಗಳೂರು,ಫೆ 07 (DaijiworldNews/AK):ರಾಜ್ಯದ ಹಲವೆಡೆ ಉದ್ಯಮಿಗಳ ನಿವಾಸ, ಕಚೇರಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಿ ಆರ್ ಪಾಟೀಲ್ ಗೌಡ ಅವರ ಮನೆ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗೋವಾ ಮತ್ತು ಹುಬ್ಬಳ್ಳಿಯಿಂದ ಬಂದಿರುವ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಕೊಪ್ಪಳ ತಾಲೂಕಿನ ಹೊಸ ಲಿಂಗಾಪುರ ಗ್ರಾಮದಲ್ಲಿರುವ ಡಿಕೆ ಶಿವಕುಮಾರ್ ಅವರ ಆಪ್ತ ವಿ ಆರ್ ಪಾಟೀಲ್ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ.
ಅಲ್ಲದೇ ಬಳ್ಳಾರಿ ಜಿಲ್ಲೆಯ ಪ್ರಮುಖ ಗುತ್ತಿಗೆದಾರ ಪಿಚ್ಚೇಶ್ವರ ರಾವ್ ಅವರ ಮನೆ ಮತ್ತು ಪಾರ್ವತಿ ನಗರದಲ್ಲಿನ ಅವರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ರಸ್ತೆ, ಕಾಲುವೆ ಸೇರಿದಂತೆ ವಿವಿಧ ಬೃಹತ್ ಕಾಮಗಾರಿಗಳ ಕಾಂಟ್ರಾಕ್ಟ್ ಮಾಡಿರುವ ಪಿಚ್ಚೇಶ್ವರ ರಾವ್ ಆದಾಯ ತೆರಿಗೆ ವಂಚನೆ ಹಾಗೂ ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಐಟಿ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ತೆರಿಗೆ ವಂಚನೆ ಆರೋಪದಡಿ ಆಂಧ್ರಪ್ರದೇಶ ಮೂಲದ ಉದ್ಯಮಿ , ರಸ್ತೆ ಗುತ್ತಿಗೆದಾರ ವಂಶಿ ಎಂಬುವರಿಗೆ ಸಂಬಂಧಿಸಿದ ಮನೆ, ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.