ನವದೆಹಲಿ, ಫೆ 07 (DaijiworldNews/PC): ಕಾಂಗ್ರೆಸ್ ಅವಧಿಯಲ್ಲಿ ಭಾರತದ ಆರ್ಥಿಕತೆಯು ದುರ್ಬಲವಾಗಿತ್ತು ಹಾಗೂ ಕಾಂಗ್ರೆಸ್ ತನ್ನ ಕುಟುಂಬಕ್ಕೆ ಮಾತ್ರ ಭಾರತ ರತ್ನ ನೀಡಿತ್ತು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ನ ಬಜೆಟ್ ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಪ್ರಧಾನಿ ಮೋದಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದು ಕಾಂಗ್ರೆಸ್ ನ ವಿರುದ್ದ ವಾಗ್ದಾಳಿಯನ್ನು ನಡೆಸಿದ್ದಾರೆ, ಅಧಿಕಾರದ ದಾಹ ಹೊಂದಿದ್ದ ಕಾಂಗ್ರೆಸ್ ಬಹಿರಂಗವಾಗಿ ಪ್ರಜಾಪ್ರಭುತ್ವದ ಕತ್ತು ಹಿಸುಕಿತ್ತು, ರಾತ್ರೋರಾತ್ರಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಕಾಂಗ್ರೆಸ್ ವಿಸರ್ಜಿಸಿತ್ತು.
ಪತ್ರಿಕೆಗಳಿಗೆ ಬೀಗ ಹಾಕಲು ಯತ್ನಿಸಿತ್ತು. ಇಷ್ಟು ಸಾಲದು ಎಂಬಂತೆ ಈಗ ದೇಶವನ್ನು ಮತ್ತೆ ಉತ್ತರ-ದಕ್ಷಿಣಗಳಾಗಿ ಇಬ್ಭಾಗ ಮಾಡುವ ಮಾತನ್ನಾಡುತ್ತಿದೆ, ಇಂತಹ ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆ ಬಗ್ಗೆ ಉಪನ್ಯಾಸ ನೀಡುತ್ತಿದೆ ಎಂದು ಮೋದಿ ಕಾಂಗ್ರೆಸ್ ವಿರುದ್ದ ಸಿಡಿದಿದ್ದಾರೆ.
ತಮ್ಮ ಅವಧಿಯ 10 ವರ್ಷದ ಆಡಳಿತಕ್ಕೂ, ಕಾಂಗ್ರೆಸ್ ಅವಧಿಯ 10 ವರ್ಷದ ಆಡಳಿತಕ್ಕೂ ಹೋಲಿಕೆ ಮಾಡಿರುವ ಪ್ರಧಾನಿ ಮೋದಿ, ನಮ್ಮ 10 ವರ್ಷಗಳ ಆಡಳಿತಾವಧಿಯನ್ನು ನಮ್ಮ ಸಾಧನೆ ಹಾಗೂ ವಿವಿಧ ನಿರ್ಧಾರಗಳಿಗಾಗಿ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.