ನವದೆಹಲಿ, ಫೆ 08 (DaijiworldNews/MS): ಭಾರತೀಯ ರಿಸರ್ವ್ ಬ್ಯಾಂಕ್ ಸತತ ಆರನೇ ಬಾರಿಗೆ ರೆಪೋ ದರ ಏರಿಕೆ ಮಾಡದೇ ಜನರಿಗೆ ಗುಡ್ನ್ಯೂಸ್ ನೀಡಿದೆ. ಕಳೆದ ಮೂರು ದಿನಗಳಿಂದ ನಡೆದ ಆರ್ಬಿಐನ ಹಣಕಾಸು ನೀತಿ ಸಭೆಯ ಬಳಿಕ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರೆಪೊ ದರ ಯಥಾಸ್ಥಿತಿ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕೊನೆಯದಾಗಿ ಕಳೆದ ವರ್ಷ ಫೆಬ್ರವರಿ 8, 2023 ರಂದು ರೆಪೋ ದರವನ್ನು ಹೆಚ್ಚಿಸಿತ್ತು.
"ಆಹಾರ ಬೆಲೆಗಳಲ್ಲಿನ ಅನಿಶ್ಚಿತತೆಯು ಮುಖ್ಯವಾಗಿ ಹಣದುಬ್ಬರದ ಮೇಲೆ ಪ್ರಭಾವ ಬೀರುತ್ತಿದೆ. ದೇಶೀಯ ಚಟುವಟಿಕೆಗಳಲ್ಲಿ ಆ ವೇಗವು ಬಲವಾಗಿ ಮುಂದುವರಿಯುತ್ತದೆ ಎಂದು ”ಗವರ್ನರ್ ಶಕ್ತಿಕಾಂತ್ ತಮ್ಮ ಬ್ರೀಫಿಂಗ್ನಲ್ಲಿ ಹೇಳಿದ್ದಾರೆ.
ಹಣಕಾಸು ನೀತಿ ಮಂಡಳಿಯ 6 ಸದಸ್ಯರಲ್ಲಿ 5 ಸದಸ್ಯರು ಹೊಂದಾಣಿಕೆಯ ನಿಲುವನ್ನು ಕಾಪಾಡಿಕೊಳ್ಳುವ ಪರ ಮತ ಹಾಕಿದ್ದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಜುಲೈ 2023 ರಲ್ಲಿ 7.44 ಶೇಕಡಾವನ್ನು ತಲುಪಿದ ನಂತರ ಇಳಿಕೆಯಾಗಿದೆ. ಡಿಸೆಂಬರ್ 2023 ರಲ್ಲಿ ಶೇಕಡಾ 5.69 ರಷ್ಟಿತ್ತು.