ನವದೆಹಲಿ, ಫೆ 08 (DaijiworldNews/AK): ಎನ್ಡಿಎ ಎಂದರೆ 'ನೋ ಡೇಟಾ ಅವೈಲೇಬಲ್' ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಕನ್ನಡಿಯಲ್ಲಿನ ಗಂಟು ಎಂದು ಆರೋಪಿಸಿದ್ದಾರೆ.ಕೇಂದ್ರ ಸರ್ಕಾರ ಎಲ್ಲಾ ಯೋಜನೆಗಳ ಬಗ್ಗೆ ಹೇಳುತ್ತದೆ. ಆದರೆ ಇಲ್ಲವರೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆರ್ಥಿಕತೆಯ ಬಿಕ್ಕಟ್ಟುಗಳನ್ನು ಪರಿಹರಿಸಲು ಮೋದಿ ಸರ್ಕಾರ ಸಂಪೂರ್ಣವಾಗಿ ಸೋತಿದೆ ಎಂದು ಟೀಕಿಸಿದ್ದಾರೆ.
ನಾವು ಅಂಕಿಅಂಶಗಳು ಲಭ್ಯವಿಲ್ಲದ ಕಾಲದಲ್ಲಿ ಇದ್ದೇವೆ ಮತ್ತು ನಮ್ಮ ಬಳಿ ಇರುವುದು ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕ ಮಾತ್ರ. ಇದು ಅವರು ರಚಿಸಿದ ಹೊಸ ಸೂಚ್ಯಂಕವಾಗಿದೆ ಮತ್ತು ಇದನ್ನು ಯಾವುದೇ ಹಿಂದಿನ ಬಡತನ ಸಂಖ್ಯೆಗಳೊಂದಿಗೆ ಹೋಲಿಸಲಾಗುವುದಿಲ್ಲ. "ಹಣಕಾಸು ಸಚಿವರು ಹೇಳಿಕೊಳ್ಳುವಂತೆ ಬಡತನವು ನಿಜವಾಗಿಯೂ ಕಡಿಮೆಯಾಗಿದೆಯೇ ಎಂದು ನಿರ್ಣಯಿಸಲು ನಮಗೆ ಯಾವುದೇ ಆಧಾರವಿಲ್ಲ ಎಂದರು.
ಇದೇ ವೇಳೆ ರಾಜ್ಯಗಳಿ ತೆರಿಗೆ ಹಂಚಿಕೆ ವಿಚಾರ ಕುರಿತು ಮಾತನಾಡಿ, ರಾಜ್ಯಗಳನ್ನು ಕಡೆಗಣಿಸುವುದು ಸರಿಯಲ್ಲ. ಕೇಂದ್ರೀಕೃತ ಸಹಕಾರಿ ಫೆಡರಲಿಸಂ ವ್ಯವಸ್ಥೆ ಅಡಿಯಲ್ಲಿ ರಾಜ್ಯಗಳು ಸಹಕಾರ ನೀಡಬೇಕು. ಆದರೆ ಕೇಂದ್ರವು ತನಗೆ ಬೇಕಾದಂತೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.