ಬೆಂಗಳೂರು,ಫೆ 08 (DaijiworldNews/ AK): ರಾಜ್ಯ ಸರಕಾರವು ಹುಕ್ಕಾ ಬಾರ್ ನಿಷೇಧಿಸಿದ ಕ್ರಮವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಸಿ.ಕೆ. ರಾಮಮೂರ್ತಿ ಅವರು ಸ್ವಾಗತಿಸಿದ್ದಾರೆ.
ಸರಕಾರವು ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.ಹುಕ್ಕಾ ಬಾರ್ಗಳಿಂದ ರಾಜ್ಯದ ಯುವಜನತೆ ದುಶ್ಚಟಕ್ಕೆ ಬಲಿ ಆಗುತ್ತಿದ್ದರು. ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯದ ಕುರಿತು ಆತಂಕ ಪಡುವಂತಾಗಿತ್ತು.ಇದೇ ವಿಚಾರವನ್ನು ನಾನು ಈ ಹಿಂದೆ ಸದನದಲ್ಲೂ ಕೂಡ ಪ್ರಸ್ತಾಪಿಸಿದ್ದೆ. ಹುಕ್ಕಾ ಬಾರ್ ನಿಷೇಧಕ್ಕೆ ಕೋರಿಕೆ ಸಲ್ಲಿಸಿದ್ದೆ. ಇದರ ಕುರಿತು ಸದನ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ಇದೀಗ ಸರಕಾರವು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ, ತಂಬಾಕು, ನಿಕೋಟಿನ್ ಸಹಿತ ಮತ್ತು ರಹಿತ ಎಲ್ಲ ಮಾದರಿಯ ಹುಕ್ಕಾ ನಿಷೇಧಿಸಿ ಆದೇಶಿಸಿರುವುದು ಸ್ವಾಗತಾರ್ಹ ಕ್ರಮ ಎಂದು ಅವರು ತಿಳಿಸಿದ್ದಾರೆ.
ಯುವಜನತೆಯ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರಕಾರವು ತನ್ನ ನಿಷೇಧ ಕುರಿತ ಆದೇಶವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ರಾಜಕೀಯಪ್ರೇರಿತ ಒತ್ತಡಕ್ಕೆ ಮಣಿಯದೆ ಕೂಡಲೇ ಹುಕ್ಕಾ ಬಾರ್ಗಳನ್ನು ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ತಕ್ಷಣದಿಂದಲೇ ಹುಕ್ಕಾ ಬಾರ್ಗಳನ್ನು ಕಡ್ಡಾಯವಾಗಿ ಮತ್ತು ಖಾಯಂ ಆಗಿ ಬಂದ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.