ನವದೆಹಲಿ, ಫೆ 09 (DaijiworldNews/MS): ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ನಾಯಕ ಜಯಂತ್ ಸಿಂಗ್ ಅವರು ತಮ್ಮ ಅಜ್ಜ ಮತ್ತು ಭಾರತದ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ನಾಗರಿಕ ಪ್ರಶಸ್ತಿ "ಭಾರತ ರತ್ನ" ನೀಡುವ ಸರ್ಕಾರದ ನಿರ್ಧಾರವನ್ನು ಶುಕ್ರವಾರ ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿಯವರ ಪೋಸ್ಟ್ ಅನ್ನು ಹಂಚಿಕೊಂಡ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ" ಹೃದಯವನ್ನು ಗೆದ್ದಿದ್ದೀರಿ" ("ದಿಲ್ ಜೀತ್ ಲಿಯಾ" )ಎಂದು ಬರೆದಿದ್ದಾರೆ. ಚೌಧರಿ ಚರಣ್ ಸಿಂಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಜಯಂತ್ ಸಿಂಗ್ ಈ ಪೋಸ್ಟ್ ಮಾಡಿದ್ದಾರೆ
"ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಿ ಗೌರವಿಸುತ್ತಿರುವುದು ನಮ್ಮ ಸರ್ಕಾರದ ಅದೃಷ್ಟ" ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. ದೇಶಕ್ಕೆ ಅವರು ನೀಡಿದ ಅನುಪಮ ಕೊಡುಗೆಗೆ ಈ ಗೌರವ ಸಮರ್ಪಿಸಲಾಗಿದೆ. ಚರಣ್ ಸಿಂಗ್ ಅವರು ತಮ್ಮ ಇಡೀ ಜೀವನವನ್ನು ರೈತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರಲಿ ಅಥವಾ ದೇಶದ ಗೃಹ ಸಚಿವರಾಗಿರಲಿ ಮತ್ತು ಶಾಸಕರಾಗಿಯೂ ಅವರು ಯಾವಾಗಲೂ ರಾಷ್ಟ್ರ ನಿರ್ಮಾಣಕ್ಕೆ ಉತ್ತೇಜನ ನೀಡುತ್ತಿದ್ದರು. ತುರ್ತುಪರಿಸ್ಥಿತಿಯ ವಿರುದ್ಧವೂ ಅವರು ದೃಢವಾಗಿ ನಿಂತಿದ್ದರು. ನಮ್ಮ ರೈತ ಸಹೋದರ ಸಹೋದರಿಯರಿಗೆ ಅವರ ಸಮರ್ಪಣೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಅವರ ಬದ್ಧತೆ ಇಡೀ ದೇಶಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ಬರೆದುಕೊಂಡಿದ್ದಾರೆ.