ಬೆಂಗಳೂರು, ಫೆ 09 (DaijiworldNews/AA): ‘ದೇಶ ವಿಭಜನೆಯ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂಬ ಹೇಳಿಕೆ ನೀಡಿದ್ದ ಕೆ. ಎಸ್ ಈಶ್ವರಪ್ಪ ವಿರುದ್ಧ ಗೃಹ ಸಚಿವ ಡಾ. ಜಿ ಪರಮೇಶ್ವರ್ ಕಿಡಿಕಾರಿದ್ದಾರೆ. ’ಈಶ್ವರಪ್ಪಗೆ ಪ್ರತ್ಯೇಕ ಕಾನೂನು ಮಾಡಲು ಹೇಳಿ, ಈ ಕಾನೂನು ಮೀರಿ ಯಾರು ಕೂಡ ವರ್ತಿಸಬಾರದು’ ಎಂದು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಡಿ.ಕೆ ಸುರೇಶ್ ಅವರ ಹೇಳಿಕೆಗೆ ಸಂಬಂಧಪಟ್ಟಂತೆ ‘ದೇಶ ವಿಭಜನೆಯ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂಬ ಹೇಳಿಕೆಯನ್ನು ಕೆ. ಎಸ್ ಈಶ್ವರಪ್ಪ ಅವರು ನೀಡಿದ್ದರು. ಈಶ್ವರಪ್ಪ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೆ. ಎಸ್ ಈಶ್ವರಪ್ಪ ಅವರ ಹೇಳಿಕೆಯ ವಿರುದ್ಧ ಗೃಹ ಸಚಿವರು ಕೂಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ ಐಆರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ‘ಕೋಮುಸೌಹಾರ್ದತೆ ಕದಡುವವರನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಚಕ್ರವರ್ತಿ ಸೂಲಿಬೆಲೆ ಅಷ್ಟೇ ಅಲ್ಲ, ಯಾರೇ ಆದರೂ ಈ ರೀತಿ ಹೇಳಿಕೆ ನೀಡಿದರೆ, ಅಂಥವರ ವಿರುದ್ಧ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.