ಚಿತ್ರದುರ್ಗ, ಫೆ 09 (DaijiworldNews/HR): ಕಡಿ, ಬಡಿ, ಕತ್ತರಿಸು, ಕೊಲ್ಲು ಎಂಬ ಭಾಷೆ ಬಳಸುವ ಒಂದು ರಾಜಕೀಯ ಪಕ್ಷದ ಮುಖಂಡರು ಆರ್.ಎಸ್.ಎಸ್. ನಲ್ಲಿ ತರಬೇತಿಯಾಗಿದೆ ಎಂದು ಹೇಳಿಕೊಳ್ಳುವವರನ್ನು ರಾಜಕೀಯ ಧುರೀಣರು ಎಂದು ಕರೆಯಬೇಕೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ನೀಡಿರುವ ದೇಶ ವಿಭಜನೆಗೆ ಕರೆ ನೀಡಿದವರನ್ನು ಮಾಡುವವರನ್ನು ಗುಂಡಿಟ್ಟು ಕೊಲ್ಲಬೇಕು ಹೇಳಿಕೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪನವರಿಗೆ ಕಡಿ, ಬಡಿ, ಕತ್ತರಿಸು, ಕೊಲ್ಲು ಇದು ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ನನಗೆ ಆರ್.ಎಸ್.ಎಸ್ ನಲ್ಲಿ ತರಬೇತಿಯಾಗಿದೆ ಎನ್ನುತ್ತಾರೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಒಂದು ರಾಜಕೀಯ ಪಕ್ಷದ ಮುಖಂಡರಾಗಿ ಹೇಳುವ ಮಾತೇ ಎಂದು ಪ್ರಶ್ನಿಸಿದರು. ಇವರನ್ನು ರಾಜಕೀಯ ಧುರೀಣರು ಎಂದು ಕರೆಯಬೇಕೇ ಎಂದರು.
ಇನ್ನು ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಆಗಿರುವ ವಿಚಾರಕ್ಕೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಸಧ್ಯಕ್ಕೆ ಇಂತಹ ಯೋಚನೆ ಸರ್ಕಾರದ ಮುಂದಿಲ್ಲ. ಆದರೆ ರಾಜ್ಯಕ್ಕೆ 100 ರೂ.ಗಳಿಗೆ ಕೇವಲ 13 ರೂ. ಬರುತ್ತಿದೆ. ಪ್ರಧಾನಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತಿಗೆ ಕಡಿಮೆ ತೆರಿಗೆ ಹಂಚಿಕೆ ವಿರೋಧಿಸಿ, ಗುಜರಾತ್ ನಿಂದ ತೆರಿಗೆ ಪಡೆಯುವುದನ್ನೇ ಕೇಂದ್ರ ಬಿಟ್ಟುಕೊಡಲಿ ಎಂದಿದ್ದರು. ಆದರೆ ಈಗ ಪ್ರಧಾನಿಯಾಗಿ, ರಾಜ್ಯದ ಪ್ರತಿಭಟನೆಗೆ ‘ದೇಶ ವಿಭಜನೆ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದ್ದಾರೆ. ಇದು ತೆರಿಗೆಯಲ್ಲಿ ರಾಜ್ಯದ ಪಾಲು ಪಡೆಯುವ ಬೇಡಿಕೆಯಾಗಿದೆ. 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ತೆರಿಗೆ ಪಾಲಿನ ಪ್ರಮಾಣವನ್ನು 4.71 % ರಿಂದ 3.64% ಇಳಿಸಲಾಗಿದೆ. 2017-18 ರಿಂದ ಇಲ್ಲಿಯವರೆಗೆ 1,87,000 ಲಕ್ಷ ಕೋಟಿ ತೆರಿಗೆ ಪಾಲು ರಾಜ್ಯಕ್ಕೆ ನಷ್ಟವಾಗಿದೆ. ಇದು ಕನ್ನಡಿಗರಿಗೆ ಕ್ರೋಧ ತರುವ ವಿಚಾರ ಎಂದರು.