ದಾವಣಗೆರೆ, ಫೆ 10 (DaijiworldNews/MS): ಮುಂದಿನ ಬಾರಿಯೂ ನರೇಂದ್ರಮೋದಿಯವರೇ ಪ್ರಧಾನಿಯಾಗಲಿದ್ದು, ಅವರ ಅವಧಿಯಲ್ಲಿಯೇ ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಂವಿಧಾನದ ಶೆಡ್ಯುಲ್ 9ಕ್ಕೆ ಸೇರಿಸಲು ಒತ್ತಾಯ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ದಾವಣಗೆರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನಾಯಕ ಸಮುದಾಯವನ್ನು ಎಸ್ಟಿಗೆ ಸೇರಿಸಲು ದೊಡ್ಡ ಮಟ್ಟದ ಹೋರಾಟ ನಡೆದಿದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಯಾಗಿದ್ದಾಗಿದ್ದಾಗ ಶಿಫಾರಸ್ಸು ಮಾಡಿದ್ದರು, ಕೇಂದ್ರದಲ್ಲಿ ಚಂದ್ರಶೇಖರ ನೇತೃತ್ವದ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮಾಜಿ ಪ್ರಧಾನಿ ದೇವೇಗೌಡರು ಎಸ್ಟಿಗೆ ಸೇರಿಸಲು ಶ್ರಮ ವಹಿಸಿದ್ದರು ಎಂದು ಹೇಳಿದರು.
ನಾಯಕ ಸಮುದಾಯಕ್ಕೆ ಎಸ್ಟಿಗೆ ಸೇರ್ಪಡೆ ಮಾಡಿದ ನಂತರ ಮೂವತ್ತೈದು ವರ್ಷಗಳ ನಂತರ ಈ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಆಶೋತ್ತರಗಳು ಹೆಚ್ಚಾಗಿವೆ. ನಮ್ಮ ಸಂವಿಧಾನ ಜೀವಂತಿಕೆ ಇರುವ ಸಂವಿಧಾನ, ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಅವಕಾಶ ಇದೆ. ಕೆಲವು ದೇಶದ ಸಂವಿಧಾನಗಳನ್ನು ಬರೆದು ಇಟ್ಟಿದ್ದಾರೆ. ಅವು ಜೀವಂತಿಕೆಯನ್ನು ಕಳೆದುಕೊಂಡಿವೆ. ದೇಶದಲ್ಲಿ ಕಾಲಕಾಲಕ್ಕೆ ಆಗುವ ಸಾಮಾಜಿಕ ಬದಲಾವಣೆಗೆ ತಕ್ಕಂತೆ ಸಂವಿಧಾನ ತಿದ್ದುಪಡಿ ಮಾಡಲು, ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಇಚ್ಚಾಶಕ್ತಿ ಬೇಕಿದೆ. ವಾಲ್ಮೀಕಿ ಸ್ವಾಮೀಜಿಗಳ ಹೋರಾಟದ ಫಲದಿಂದ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ 7 ಕ್ಕೆ ಹೆಚ್ಚಳ ಮಾಡಲು ನನಗೆ ಪ್ರೇರಣೆಯಾಯಿತು ಎಂದು ಹೇಳಿದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಕೆಲವರು ಜೇನುಗೂಡಿಗೆ ಕೈ ಹಾಕುತ್ತಿದ್ದೀರಿ ಎಂದು ಹೇಳಿದರು.ನಾನು ನನಗೆ ಜೇನು ಕಡಿದರೂ ಚಿಂತೆಯಿಲ್ಲ, ಈ ಸಮುದಾಯಗಳಿಗೆ ಜೇನು ತಿನ್ನಿಸುತ್ತೇನೆ ಎಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ. ಮೀಸಲಾತಿ ಹೆಚ್ಚಳದ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದೇವೆ. ಅಲ್ಲದೇ ಶೆಡ್ಯುಲ್ 9 ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಮುಂದಿನ ಬಾರಿಯೂ ಮೋದಿಯವರೇ ಪ್ರಧಾನಿ ಆಗುವುದರಿಂದ ಮೀಸಲಾತಿ ಹೆಚ್ಚಳವನ್ನು ಶೆಡ್ಯುಲ್ 9 ಗೆ ಸೇರಿಸಲು ಒತ್ತಾಯಿಸುವುದಾಗಿ ತಿಳಿಸಿದರು.
ಮೀಸಲಾತಿ ಹೆಚ್ಚಳ ದಿಂದ ಎಸ್ಟಿ ಸಮುದಾಯಕ್ಕೆ ಸುಮಾರು 3500 ಹೆಚ್ಚು ಎಂಜನಿಯರಿಂಗ್ ಸೀಟುಗಳು, ಸುಮಾರು 400 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ದೊರೆತಿವೆ. ಅಲ್ಲದೆ ಎಲ್ಲ ಇಲಾಖೆಗಳ ಬಡ್ತಿಯಲ್ಲಿ ಹೆಚ್ಚು ಅವಕಾಶಗಳು ದೊರೆತಿವೆ. ನಾವು ಮಾಡಿರುವ ಆದೇಶವನ್ನು ಈ ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಆ ಕೆಲಸವನ್ನು ವಾಲ್ಮೀಕಿ ಸ್ವಾಮೀಜಿ ಈ ಸರ್ಕಾರ ದಿಂದ ಮಾಡಿಸಬೇಕು ಎಂದರು.
ಪ್ರಜಾಪ್ರಭುತ್ವ ದಲ್ಲಿ ಜನರ ಇಚ್ಚಾಶಕ್ತಿಯೇ ಅಂತಿಮ, ಆ ವಿಚಾರದಲ್ಲಿ ನನಗೆ ಜನರ ಇಚ್ಚಾಶಕ್ತಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ಇದೆ. ನನ್ನ ಅವಧಿಯಲ್ಲಿ ಎಸ್ಸಿಎಸ್ಟಿ, ಹಿಂದುಳಿದವರಿಗೆ ಸಾಮಾಜಿಕವಾಗಿ ನ್ಯಾಯ ಕೊಡಲು ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿದ್ದು, ನಾವು ಮಾಡಿರುವ ತೀರ್ಮಾನಗಳು ಮುಂದಿನ ದಿನಗಳಲ್ಲಿ ಆ ಸಮುದಾಯಗಳಿಗೆ ಅನುಕೂಲವಾಗುವ ವಿಶ್ವಾಸ ನನಗಿದೆ.