ಶಿವಮೊಗ್ಗ, ಫೆ 10(DaijiworldNews/AA): ನನ್ನ ವಿರುದ್ಧ ಇಂತಹ ನೂರು ಎಫ್ ಐಆರ್ ಹಾಕಿದರು ನಾನು ಹೆದರುವುದಿಲ್ಲ. ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ. ದೇಶದ್ರೋಹಿ ಹೇಳಿಕೆ ನೀಡುವವರ ಮೇಲೆ ಪ್ರಕರಣ ದಾಖಲಿಸಿಲ್ಲ. ಆದರೆ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಸದ ಡಿ.ಕೆ ಸುರೇಶ್ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದೆ. ಸಂಸದ ಡಿ.ಕೆ ಸುರೇಶ್ ಅವರಿಗೆ ಮೊದಲು ನೋಟಿಸ್ ನೀಡಲಿ. ನನ್ನ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡುತ್ತಿದೆ. ನಾನು ಎಲ್ಲೂ ಡಿ.ಕೆ ಸುರೇಶ್ ಅವರಿಗೆ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಲ್ಲ. ಹೊಸ ಕಾನೂನು ತನ್ನಿ ಎಂದು ಹೇಳಿರುವುದಷ್ಟೇ. ಸದ್ಯ ನನ್ನ ಪುಣ್ಯ ನಾನು ದೇಶದ್ರೋಹಿ ಎಂದು ಯಾರು ಹೇಳಿಲ್ಲ ಎಂದರು.
ನನಗೆ ನೋಟಿಸ್ ಬಂದಿದ್ದು, ಕಾನೂನು ಬದ್ದವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ. ನನಗೆ ಇನ್ನೂ ನೂರು ನೋಟಿಸ್ ನೀಡಿ. ನನ್ನ ಅಭ್ಯಂತರವೇನಿಲ್ಲ. ಆದರೆ ಡಿ.ಕೆ ಸುರೇಶ್ ಗೆ ಯಾಕೆ ನೋಟಿಸ್ ನೀಡಿಲ್ಲ ಎಂದು ಪ್ರಶ್ನಿಸಿದ ಅವರು, ಈ ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ನೀಡಿದವರ ಬಗ್ಗೆ ಡಿ.ಕೆ ಸುರೇಶ್ ಅವರಿಗೆ ತಿಳಿದಿಲ್ಲ. ನನ್ನ ಮಾತನ್ನು ತಿರುಚುವ ಪ್ರಯತ್ನ ಮಾಡಲಾಗುತ್ತಿದೆ. ನನ್ನ ಹೇಳಿಕೆಯನ್ನು ಸ್ವತಂತ್ರಕ್ಕಾಗಿ ಹೋರಾಡಿದವರು ಸ್ವಾಗತಿಸುತ್ತಾರೆ. ಈ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಗುವ ನಂಬಿಕೆ ಇದೆ ಎಂದು ಅವರು ಹೇಳಿದರು.
ಗೃಹ ಸಚಿವರೇ ಈ ಬಗ್ಗೆ ಗಮನಹರಿಸಿ ಪ್ರಕರಣ ದಾಖಲಿಸಿ. ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿಯೆಂದು ಪ್ರಧಾನಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಕೇಂದ್ರಕ್ಕೆ ಪತ್ರ ಬರೆಯುವಂತೆ ಸಚಿವ ಪರಮೇಶ್ವರ್ ಅವರು ಹೇಳಿದ್ದಾರೆ. ಆದ್ದರಿಂದ ಕೇಂದ್ರಕ್ಕೆ ನಾನು ಪತ್ರ ಬರೆಯುತ್ತೇನೆ ಎಂದು ಅವರು ತಿಳಿಸಿದ್ದಾರೆ.