ಕಲಬುರಗಿ, ಫೆ 10 (DaijiworldNews/HR): ಕರ್ನಾಟಕದಲ್ಲಿರುವ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ವೆಚ್ಚ ಬೋರ್ಡ್ ಕಡ್ಡಾಯವಾಗಿ ಹಾಕಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸರಕಾರಿ ಆರೋಗ್ಯ ಸೇವೆ ಬಡವರಿಗೆ ಮತ್ತು ಅಶಕ್ತರಿಗೆ ತಲುಪುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಆರೋಗ್ಯ ಸೇವೆಯ ಉತ್ತಮ ಸೌಲಭ್ಯ ಜನರಿಗೆ ಸಿಗಬೇಕಾದರೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನೀಡುವ ವೆಚ್ಚದ ಕುರಿತು ಸರಿಯಾದ ಮಾಹಿತಿಯನ್ನು ರೋಗಿಗಳಿಗೆ ಮತ್ತು ರೋಗಿಯ ಸಂಬಂಧಿಗಳಿಗೆ ತಿಳುವಳಿಕೆ ನೀಡಿ ಆ ಬಳಿಕ ಚಿಕಿತ್ಸೆ ಆರಂಭಿಸಬೇಕು ಎಂದರು.
ಇನ್ನು ನಾನು ಖಾಸಗಿ ಆಸ್ಪತ್ರೆಗಳ ವಿರುದ್ಧವಾಗಿಲ್ಲ. ನನ್ನ ಪತ್ನಿ ಕೂಡ ಒಂದು ದವಾಖಾನೆಯನ್ನು ನಡೆಸುತ್ತಾರೆ. ಆದರೆ ಚಿಕಿತ್ಸೆಯ ಹೆಸರಿನಲ್ಲಿ ಬಡವರಿಗೆ ಹಾಗೂ ತೊಂದರೆಯಲ್ಲಿರುವವರಿಗೆ ಇನ್ನಷ್ಟು ತೊಂದರೆ ಕೊಡಬಾರದು ಎನ್ನುವುದು ನಮ್ಮ ಸರ್ಕಾರದ ಹಾಗೂ ಮಲ್ಲಿಕಾರ್ಜುನ ಖರ್ಗೆ ಆಶಯವು ಆಗಿದೆ ಎಂದು ತಿಳಿಸಿದ್ದಾರೆ.