ನವದೆಹಲಿ, ಫೆ 10(DaijiworldNews/SK): ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗೆ 2023–24ನೇ ಸಾಲಿನಲ್ಲಿ ಶೇ 8.25ರ ಬಡ್ಡಿ ದರವನ್ನು ನಿಗದಿಪಡಿಸಲಾಗಿದ್ದು, ಈ ಮೂಲಕ ಕಳೆದ ಮೂರು ವರ್ಷಗಳಲ್ಲೇ ಇದು ಗರಿಷ್ಟ ಬಡ್ಡಿ ದರವಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದ ಕಾರ್ಮಿಕ ಇಲಾಖೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) ನೀತಿ ನಿರ್ಧಾರದ ಉನ್ನತ ಸಮಿತಿಯಾಗಿರುವ, ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು ತನ್ನ 235ನೇ ಸಭೆಯಲ್ಲಿ 2023–24ನೇ ಸಾಲಿನ ಬಡ್ಡಿ ದರವನ್ನು ಹೆಚ್ಚಿಸಿದೆ.
EPFO ಮಾರ್ಚ್ 2023 ರಲ್ಲಿ EPF ಮೇಲಿನ ಬಡ್ಡಿದರವನ್ನು 2022–23 ರಲ್ಲಿ ಶೇ 8.15ಕ್ಕೆ ನಿಗದಿಪಡಿಸಿತ್ತು. 2021–22ನೇ ಸಾಲಿನಲ್ಲಿ ಇದು ಶೇ 8.10ರಷ್ಟಿತ್ತು. 6 ಕೋಟಿ ಠೇವಣಿದಾರರಿಗೆ ಸಿಗುತ್ತಿದ್ದ ಬಡ್ಡಿದರ ಕಳೆದ ನಾಲ್ಕು ದಶಕಗಳ ಹೋಲಿಸಿದಲ್ಲಿ 2021–22ರಲ್ಲಿ ಅತ್ಯಂತ ಕನಿಷ್ಠ ಶೇ 8.10ಕ್ಕೆ ನಿಗದಿಪಡಿಸಲಾಗಿತ್ತು. 2020–21ರಲ್ಲಿ ಇದು ಶೇ 8.5ರಷ್ಟಿತ್ತು. 1977–78ರಲ್ಲಿ ಇಪಿಎಫ್ ಮೇಲಿನ ಬಡ್ಡಿದರ ಶೇ 8ರಷ್ಟಿತ್ತು.
ಇದೀಗ 2023-24 ರ 8.25% ಬಡ್ಡಿ ದರ ಹೆಚ್ಚಳವು ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.