ಬೆಂಗಳೂರು, ಫೆ(DaijiworldNews/SK): ಈಶ್ವರಪ್ಪ ಅವರು ಸ್ವಲ್ಪ ಮುಂಗೋಪಿ, ಆದರೆ ಗುಂಡು ಹಾರಿಸುವಷ್ಟು ಕಟುಕರಲ್ಲ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ʻದೇಶದ್ರೋಹ ಹೇಳಿಕೆ ನೀಡುವವರನ್ನು ಗುಂಡಿಕ್ಕಿಕೊಲ್ಲುವ ಕಾನೂನು ತನ್ನಿʼ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ನಮ್ಮ ಪಕ್ಷದಲ್ಲಿ ಈಶ್ವರಪ್ಪನವರು ಸ್ವಲ್ಪ ಉಗ್ರವಾದಿ. ಯಾವುದೇ ವಿಚಾರ ಬಂದಾಗಲು ಅಕ್ರೋಶ ಭರಿತರಾಗಿ ಏನಾದರೂ ಮಾತನಾಡಿಬಿಡುತ್ತಾರೆ. ಆದೇ ರೀತಿ ಆವೇಶದಲ್ಲಿ ಬಾಯಿತಪ್ಪಿ ಮಾತನಾಡಿರಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಇನ್ನು ಈಶ್ವರಪ್ಪ ಅವರು ಒಬ್ಬ ಹಿರಿಯ ರಾಜಕಾರಣಿಯಾಗಿ ಈ ರೀತಿ ಮಾತುಗಳನ್ನು ಆಡಬಾರದಿತ್ತು. ಆದರೆ ಅವರು ಗುಂಡು ಹಾರಿಸುವಷ್ಟು ಉಗ್ರರಲ್ಲ. ದೇಶ ವಿಭಜನೆ ಬಂದಾಗ ಕೋಪ ಬರುತ್ತದೆ. ಆದ್ದರಿಂದ ಉದ್ವೇಗದಲ್ಲಿ ಮಾತನಾಡಿದ್ದಾರೆ. ಇದನ್ನು ಡಿ.ಕೆ ಸುರೇಶ್ ಅವರು ಬಿಡಬೇಕು. ಅದೇ ರೀತಿ ಏನೂ ವಿಷಯ ಸಿಗದೇ ಇದ್ದಾಗ ಈ ರೀತಿ ಒಂದೇ ವಿಷಯವನ್ನು ಹಿಡಿದುಕೊಂಡು ನೇತಾಡುವುದನ್ನು ಬಿಡಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.