ನವದೆಹಲಿ, ಫೆ 12 (DaijiworldNews/SK): ತಮಿಳುನಾಡಿಗೆ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ತಲಾ 2.5 ಟಿಎಂಸಿ ಕಾವೇರಿ ನೀರನ್ನು ಕರ್ನಾಟಕ ರಾಜ್ಯ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ
ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕವು 7.61 ಟಿಎಂಸಿ ಬಾಕಿಯ ಜೊತೆಗೆ, ಫೆಬ್ರವರಿ 2024 ರಿಂದ ಮೇ 2024 ರ ತಿಂಗಳುಗಳಿಗೆ, ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಒತ್ತಾಯಿಸಿತು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕರ್ನಾಟಕವು ದಿನಾಂಕ 01.06.2023 ರಿಂದ 09.02.2024 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇ 52.43 ಇರುತ್ತದೆ. ಅನಿಯಂತ್ರಿತ ಜಲಾನಯನ ಪ್ರದೇಶದಿಂದ ಉಂಟಾಗುವ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲು ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿತು.
ಇನ್ನು ಅಂತಿಮವಾಗಿ ಸಭೆಯಲ್ಲಿ ಫೆಬ್ರವರಿ 2024 ಮತ್ತು ಮಾರ್ಚ್ 2024 ರ ಉಳಿದ ಅವಧಿಗೆ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ CWDT ಯ ಆದೇಶದ ಪ್ರಕಾರ ಅಂತರ-ರಾಜ್ಯ ಸಂಪರ್ಕ ಬಿಂದು ಬಿಳಿಗುಂಡ್ಲುನಲ್ಲಿ ಕರ್ನಾಟಕವು ನಿಗದಿತ ಪ್ರಮಾಣದ ನೀರು ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು CWRC ನಿರ್ಧರಿಸಿತು.