ಬೆಂಗಳೂರು, ಫೆ 13 (DaijiworldNews/SK): ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದ ಅಭಿವೃದ್ಧಿಗಾಗಿ ದುಡ್ಡು ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿಕೆ.ಶಿವಕುಮಾರ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡ ತೇಜಸ್ವಿ ಸೂರ್ಯ ಅವರು, ನಗರದ ಸಂಚಾರ ದೃಷಿಯಿಂದ ಬಹುಮುಖ್ಯ ಪ್ರದೇಶವಾಗಿರುವ ಬನಶಂಕರಿಯಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಸಾರ್ವಜನಿಕರ ಸಂಚಾರಕ್ಕೆ ಬಹಳ ಅಡೆತಡೆಗಳು ಉಂಟಾಗುತ್ತಿದೆ. ಇವುಗಳ ಮಧ್ಯೆ ದಿನನಿತ್ಯ ಸಂಚಾರ ಮಾಡುವ ಜನರಿಗಾಗಿ ಸ್ಕೈವಾಕ್ ನಿರ್ಮಾಣ ಮಾಡಬೇಕು. ಸ್ಕೈವಾಕ್ ನಿರ್ಮಾಣಕ್ಕೆ ಸರ್ಕಾರದಿಂದ ದುಡ್ಡು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇನ್ನು ಇದೇ ವಿಚಾರವನ್ನು ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ನಿಮ್ಮ ಗಮನಕ್ಕೂ ತಂದಿದ್ದೇನೆ. ಅದಕ್ಕೆ ತಾವು ಸಕಾರಾತ್ಮಕವಾಗಿ ಸ್ಪಂದಿಸಿದ್ದೀರಿ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿದ್ದೇನೆ. ಆದರೆ ಕಾಮಗಾರಿ ಬಗ್ಗೆ ಮಾತ್ರ ಇನ್ನೂ ಸ್ಪಷ್ಟನೆ ಇಲ್ಲ. ನಾವು ಅಲ್ಲಿ ಸ್ಕೈವಾಕ್ ನಿರ್ಮಿಸುವುದರಿಂದ 50 ಸಾವಿರ ಜನಕ್ಕೆ ಪ್ರಯೋಜನವಾಗಲಿದೆ. ಹೀಗಾಗಿ ಬಿಬಿಎಂಪಿ ಬಜೆಟ್ನಲ್ಲಿ ಅನುದಾನ ಮೀಸಲಿಡಿ ಎಂದು ಪತ್ರದಲ್ಲಿ ಬರೆದಿದ್ದಾರೆ.