ಹುಣಸೂರು, ಫೆ 13 (DaijiworldNews/HR): ಹುಣಸೂರು ತಾಲೂಕಿನ ಜಾಬಗೆರೆಯಲ್ಲಿ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಗೆ ಅಧ್ಯಕ್ಷರ ಪತಿ ಹಾಗೂ ಸದಸ್ಯರೊಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಉಪಾಧ್ಯಕ್ಷರ ಭುಜದ ಮೂಳೆ ಮುರಿದು ಅಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ತಾಲೂಕಿನ ಶಂಕರೇಗೌಡನಕೊಪ್ಪಲು ನಿವಾಸಿ ನಾಗರಾಜು ಅವರ ಪತ್ನಿ ಹಾಗೂ ಜಾಬಗೆರೆ ಗ್ರಾ.ಪಂ.ಉಪಾಧ್ಯಕ್ಷೆ ಜಯಮ್ಮ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜಾಬಗೆರೆ ಪಂಚಾಯಿತಿಯ ಕಟ್ಟಡದ ಮೇಲಂತಸ್ತಿನ ಕಟ್ಟದ ಕಾಮಗಾರಿ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ ಉಪಾಧ್ಯಕ್ಷೆ ಜಯಮ್ಮ ಪರಿಶೀಲಿಸಿ ಕೆಲಸ ಸರಿಯಾಗಿ ಮಾಡುತ್ತಿಲ್ಲ. ಕಳಪೆ ಕಾಮಗಾರಿ ನಡೆಸುತ್ತಿದ್ದೀರಾ, ಪಂಚಾಯತ್ ಕಟ್ಟಡವೇ ಹೀಗಾದರೆ ಹೇಗೆಂದು ಪ್ರಶ್ನಿಸಿ, ಕೆಲಸ ಸ್ಥಗಿತಗೊಳಿಸಿ, ಇಲ್ಲದಿದ್ದಲ್ಲಿ ನಿಮ್ಮ ಮೇಲೆ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದೆಂದು ಹೇಳಿದರು.
ಪಿ.ಡಿ.ಒ ಮಿನಾಕ್ಷಮ್ಮರಿಗೆ ಹೇಳಿದ ವೇಳೆ ಪಂಚಾಯತ್ ಕಚೇರಿಯಲ್ಲೇ ಕುಳಿತಿದ್ದ ಗ್ರಾ.ಪಂ.ಅಧ್ಯಕ್ಷೆ ಮಂಜುಳಮ್ಮರ ಪತಿ ಹಾಗೂ ಸದಸ್ಯ ತಿಮ್ಮನಾಯ್ಕ ಹೊರ ಬಂದು ನೀನ್ಯಾರು ಕೇಳೊದಕ್ಕೆ, ಇಲ್ಲಿ ನಮ್ಮದೆ ದರ್ಬಾರ್, ನನ್ನ ಹೆಂಡ್ತಿನೆ ಅಧ್ಯಕ್ಷೆ ನಮ್ಮದೆ ಅಧಿಕಾರ, ನಿನ್ಯಾರು ಕೇಳೊದಿಕೆ, ಇಲ್ಲಿ ಉಪಾದ್ಯಕ್ಷರಿಗೆ ಯಾವ ಅಧಿಕಾರ ಇಲ್ಲವೆಂದು ಕೇವಲವಾಗಿ ಮಾತನಾಡಿದ್ದರಿಂದ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಉಪಾಧ್ಯಕ್ಷೆ ಜಯಮ್ಮರ ಮೇಲೆ ತಿಮ್ಮನಾಯಕ ದೈಹಿಕವಾಗಿಯೂ ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.