ಬೆಂಗಳೂರು, ಫೆ 13 (DaijiworldNews/AA): ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸುಳ್ಳು ಹೇಳುವಂತಹ ಕ್ಯಾಂಪೇನ್ ಪ್ರಾರಂಭಿಸಿದೆ. ಸಿಎಂ ಸಿದ್ಧರಾಮಯ್ಯ ಅವರು ಸಿದ್ದರಾಮಯ್ಯ ಅಲ್ಲ, ಸುಳ್ಳುರಾಮಯ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದರಲ್ಲಿ ಎಕ್ಸ್ ಪರ್ಟ್. ಅವರು 2 ಕಾರಣಗಳಿಗಾಗಿ ಸುಳ್ಳು ಹೇಳುತ್ತಿದ್ದಾರೆ. ನೀಡಿದ ಭರವಸೆಗಳನ್ನು ಈಡೇರಿಸಲಾಗದೇ ಸುಳ್ಳು ಹೇಳುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಜಗಳ ಡೈವರ್ಟ್ ಮಾಡಲು ಹೋರಾಟ ನಡೆಸುತ್ತೇವೆ ಎಂದು ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ತಮ್ಮದೆಂದು ಹೇಳಿಕೊಂಡಿದೆ. ಸಿದ್ದರಾಮಯ್ಯ ಅವರು ಅನುದಾನ ಹಂಚಿಕೆಯ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಸಿಎಂ ಆದವರು ಈ ರೀತಿ ಹೇಳುವುದು, ಪ್ರಧಾನ ಮಂತ್ರಿಯನ್ನು ನಿಂದಿಸುವುದು ಖಂಡನೀಯ ಎಂದು ಹೇಳಿದರು.