ದೆಹಲಿ, ಫೆ 13 (DaijiworldNews/AA): ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ ಪಿ) ಖಾತರಿಪಡಿಸುವ ಕಾನೂನನ್ನು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆ ನಡೆಸದೆ ತರಾತುರಿಯಲ್ಲಿ ಜಾರಿಗೆ ತರಲು ಸಾಧ್ಯವಿಲ್ಲ. ರೈತರು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಚಂಡೀಗಢದಲ್ಲಿ ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ರೈತರ ಗುಂಪುಗಳೊಂದಿಗೆ ಮುಂಡಾ ಅವರು ಎರಡು ಸುತ್ತಿನ ಚರ್ಚೆ ನಡೆಸಿದ್ದರು. ಈ ಚರ್ಚೆಯಲ್ಲಿ ಅವರ ಹಲವು ಬೇಡಿಕೆಗಳಿಗೆ ನಾವು ಒಪ್ಪಿಗೆ ಸೂಚಿಸಿದ್ದೇವೆ. ಆದರೆ ಕೆಲ ಬೇಡಿಕೆಗಳಲ್ಲಿ ಒಪ್ಪಂದಕ್ಕೆ ಬಂದಿಲ್ಲ. ಮಾತುಕತೆಗಳು ಇನ್ನೂ ನಡೆಯುತ್ತಿವೆ. ಆಡಳಿತಾತ್ಮಕ ಮಟ್ಟದಲ್ಲಿ ಮಾಡಬಹುದಾದ ಅವರ ಹಲವು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ಇನ್ನು ಎಂಎಸ್ ಪಿಯನ್ನು ಜಾರಿಗೆ ತರುವ ನೀತಿಗೆ ರಾಜ್ಯ ಸರ್ಕಾರಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವ ಸಮಗ್ರ ವಿಧಾನದ ಅಗತ್ಯವಿದೆ. ನಾವು ಯಾವ ರೀತಿಯ ಕಾನೂನನ್ನು ಜಾರಿಗೆ ತರಬೇಕೆಂಬುದನ್ನು ನೋಡಬೇಕು. ಕಾನೂನಿನ ಪ್ರಯೋಜನಗಳು ಹಾಗೂ ಅನಾನುಕೂಲಗಳು ಯಾವುವು ಎಂದು ಅರಿಯಬೇಕು. ಮೋದಿ ನೇತೃತ್ವದ ಸರ್ಕಾರ ಎಲ್ಲಾ ಪಾಲುದಾರರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ. ತರಾತುರಿಯಲ್ಲಿ ಯಾವುದೇ ಘೋಷಣೆ ಮಾಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.