ಬೆಂಗಳೂರು,ಫೆ 13 (DaijiworldNews/AK): ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಖಾತ್ರಿಯಾಗಿ ಪಾವತಿಯಾಗುತ್ತಿದ್ದ ರೂ. 5,000 ಸಾವಿರದ ಬದಲು ರೂ.7,000 ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ಅಹವಾಲುಗಳನ್ನ ಆಲಿಸಿದ ಸಚಿವವರು, ಆಶಾ ಕಾರ್ಯಕರ್ತೆಯರ ಪರ ಸರ್ಕಾರವಿದೆ. ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.
ಆಶಾ ಕಾರ್ಯಕರ್ತೆಯರ ಕುಂದುಕೊರತೆಗಳ ನಿವಾರಣೆಯ ನಿಟ್ಟಿನಲ್ಲಿ ಸರ್ಕಾರ ಮತ್ತು ಇಲಾಖೆಯು ಮುಕ್ತ ಮನಸ್ಸಿನಲ್ಲಿದ್ದು, ತ್ವರಿತ ಪ್ರತಿಸ್ಪಂದನೆಗೆ ಸದಾ ಸಿದ್ಧವಾಗಿದೆ. ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನದ ವಿತರಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ತಾನು ಗಳಿಸಿದ ಪ್ರೋತ್ಸಾಹಧನದ ವಿವರಗಳನ್ನು ಗಮನಿಸಲು ಆಶಾ ನಿಧಿ ತಂತ್ರಾಂಶದಲ್ಲಿ ಸೃಜಿಸಲಾಗಿದ್ದು, ಆಶಾ ಕಾರ್ಯಕರ್ತೆಯರು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಡೆದ ಪ್ರೋತ್ಸಾಹಧನದ ವಿವರಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತರಿಗೆ ಮಾಸಿಕವಾಗಿ ರಾಜ್ಯ ಸರ್ಕಾರ ನೀಡುವ ರೂ. 5,000 ಜೊತೆಗೆ ರೂ.2,000 ಸೇರಿಸಿ ಒಟ್ಟು ರೂ.7,000 ಖಾತ್ರಿಪಡಿಸುವುದಾಗಿ ಘೋಷಿಸಿದರು. ಉಳಿದಂತೆ ಆಶಾ ಕಾರ್ಯಕರ್ತೆಯರು ನಡೆಸುವ ಆರೋಗ್ಯ ಸೇವೆ ಚಟುವಟಿಕೆಗಳನ್ನ ಪರಗಣಿಸಿ ಪ್ರೋತ್ಸಾಹಧನವನ್ನ ಪಾರದರ್ಶಕವಾಗಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.