ನವದೆಹಲಿ, ಫೆ 14 (DaijiworldNews/ AK):ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಸೋನಿಯಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಜೈಪುರದಲ್ಲಿ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆಗೆ ಇದ್ದರು.
ಕಾಂಗ್ರೆಸ್ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜಸ್ಥಾನದಿಂದ ಸೋನಿಯಾ ಗಾಂಧಿ ಅವರನ್ನು ನಾಮನಿರ್ದೇಶನ ಮಾಡಿದೆ.
ಬಿಹಾರದಿಂದ ಕಾಂಗ್ರೆಸ್ನ ಅಖಿಲೇಶ್ ಪ್ರಸಾದ್ ಸಿಂಗ್, ಹಿಮಾಚಲ ಪ್ರದೇಶದಿಂದ ಅಭಿಷೇಕ್ ಮನು ಸಿಂಘ್ವಿ ಮತ್ತು ಮಹಾರಾಷ್ಟ್ರದಿಂದ ಚಂದ್ರಕಾಂತ್ ಹಂದೋರೆ ನಾಮ ನಿರ್ದೇಶನ ಮಾಡಲಾಗಿದೆ.
ಲೋಕಸಭೆಯಲ್ಲಿ ರಾಯ್ ಬರೇಲಿಯನ್ನು ಪ್ರತಿನಿಧಿಸಿರುವ ಸೋನಿಯಾ ಗಾಂಧಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನಲಾಗುತ್ತಿದೆ.
ಅವರು 1999 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು.
15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸದಸ್ಯರು ಏಪ್ರಿಲ್ನಲ್ಲಿ ನಿವೃತ್ತರಾಗುತ್ತಿದ್ದು, ಫೆಬ್ರವರಿ 27 ರಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ.