ಬೆಂಗಳೂರು, ಫೆ 16(DaijiworldNews/SK): ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು 10.15 ಕ್ಕೆ 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಲಿದ್ದು, ಇದು ಸಿದ್ದರಾಮಯ್ಯ ಅವರು ಮಂಡನೆ ಮಾಡುತ್ತಿರುವ 15ನೇ ಬಜೆಟ್ ಆಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ನಿಟ್ಟಿನಲ್ಲಿ ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ ಬಿಜೆಪಿಯ ಭದ್ರಕೋಟೆ ಕರಾವಳಿ ಭಾಗ ಗೆಲ್ಲಲು ಬರದಲ್ಲಿ ಈ ಬಾರಿ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜನಪ್ರಿಯ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ಇಂದಿನ ಬಜೆಟ್ ನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2,500 ಕೋಟಿ, ಆದಿದ್ರಾವಿಡ ಸಮುದಾಯದ ಕುಲದೈವ ಸತ್ಯಸಾರಮಾನಿ ಅಲೇರ ಪಂಜುರ್ಲಿ ಮೂಲಸ್ಥಾನ ಅಲೇರಿ, ಮೂಡಬಿದ್ರೆಯ ಜೀರ್ಣೋದ್ಧಾರದ ಅಭಿವೃದ್ಧಿಗೂ 15-20 ಕೋಟಿ ಘೋಷಿಸುವ ಸಾಧ್ಯತೆ ಇದೆ.
ಇನ್ನು ಮಂಗಳೂರಿನಲ್ಲಿ ಜವಳಿ ಪಾರ್ಕ್ ಘೋಷಣೆ, ಬಂದರುಗಳಲ್ಲಿ ಹೂಳೆತ್ತುವ ಮೂಲಕ ಮೀನುಗಾರರಿಗೆ ನೆರವು, ಫಲ್ಗುಣಿ, ನೇತ್ರಾವತಿ ಬಾರ್ಜ್-ಮಂಗಳೂರು-ಕಾರವಾರ ಜಲಮಾರ್ಗ ಸ್ಥಾಪನೆ, ರಬ್ಬರ್ ಬೆಳೆಗೆ ಬೆಂಬಲ ಬೆಲೆ ಹೆಚ್ಚಿನ ಆದ್ಯತೆ ನೀಡಲಿದ್ದು, ಇದರೊಂದಿಗೆ ಮಂಗಳೂರಿನಲ್ಲಿ ಐಟಿ ಪಾರ್ಕ್ ಜೊತೆಗೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಯೋಜನೆ ಘೋಷಣೆ ಮಾಡುವ ನಿರೀಕ್ಷೆಯೂ ಎಂದು ವರದಿಯಾಗಿದೆ.