ನವದೆಹಲಿ, ಫೆ 16 (DaijiworldNews/SK): ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿಯಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಬ್ಲಾಕ್ ಮಾಡಿದೆ. ಇದೀಗ ಈ ವಿಚಾರವಾಗಿ ಎಐಸಿಸಿ ಖಜಾಂಚಿ ಅಜಯ್ ಮಾಕನ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಜಯ್ ಮಾಕನ್ ಅವರು, ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಸರ್ಕಾರ ಕಾಂಗ್ರೆಸ್ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿದೆ. ಇದ್ದರಿಂದ ಪ್ರಜಾಪ್ರಭುತ್ವವನ್ನೇ ಫ್ರೀಜ್ ಮಾಡಿದಂತಾಗಿದೆ. ಇನ್ನು ಖಾತೆಯನ್ನು ಫ್ರೀಜ್ ಮಾಡಿದ್ದರಿಂದ ನಮಗೆ ಸಂಬಳ ನೀಡಲು, ವಿದ್ಯುತ್ ದರ ಪಾವತಿಸಲೂ ಹಣವಿಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅಧಿಕಾರದಾಹದ ಮೋದಿ ಸರ್ಕಾರವು ಲೋಕಸಭೆ ಚುನಾವಣೆಗೆ ಮುನ್ನ ದೇಶದ ಅತಿದೊಡ್ಡ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ಭಾರತದ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ.
ಬಿಜೆಪಿಯವರು ಸಂಗ್ರಹಿಸಿದ ಅಸಂವಿಧಾನಿಕ ಹಣವನ್ನು ಅವರು ಚುನಾವಣೆಗೆ ಬಳಸುತ್ತಾರೆ, ಆದರೆ ನಾವು ಕ್ರೌಡ್ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ಸೀಲ್ ಮಾಡಲಾಗುತ್ತದೆ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.