ಬೆಂಗಳೂರು, ಫೆ 15 (DaijiworldNews/MS): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿದ್ದು, ಐದು ಗ್ಯಾರಂಟಿ ಮುಂದುವರಿಸುವ ಜತೆಗೆ ವಸತಿ, ಕೃಷಿ, ಗ್ರಾಮೀಣಭಿವೃದ್ಧಿ, ಕೈಗಾರಿಕೆ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸಿ ಎಲ್ಲ ವರ್ಗದ ಬಡವರಿಗೆ ಯೋಜನೆ ರೂಪಿಸಿರುವುದು ಸಿದ್ದರಾಮಯ್ಯ ಅವರ ಬದ್ಧತೆಗೆ ಸಾಕ್ಷಿ ಎಂದು ಹೇಳಿದ್ದಾರೆ.
ವಸತಿ ಇಲಾಖೆಯಲ್ಲಿ 12 ಲಕ್ಷ ಮನೆ ನಿರ್ಮಾಣ ದ ಗುರಿ ರೂಪಿಸಿ ಈ ವರ್ಷದ ಬಜೆಟ್ ನಲ್ಲಿ 3 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಧ ಕ್ಕೆ ನಿಂತಿದ್ದ 3 ಲಕ್ಷ ಮನೆ ಪೂರ್ಣ ಗೊಳಿಸಲು ಅನುದಾನ ಒದಗಿಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಡಿ 50 ಮೊರಾರ್ಜಿ ದೇಸಾಯಿ ವಸತಿ ಶಾಲೆ,100 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ, 100 ಹೊಸ ಮೌಲಾನಾ ಅಜಾದ್ ಶಾಲೆ ಆರಂಭಿಸುವ ಘೋಷಣೆ ಮಾಡಿದ್ದು ಇದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ವಖ್ಫ್ ಆಸ್ತಿ ಸಂರಕ್ಷಣೆ ಗೆ 100 ಕೋಟಿ ರೂ., ಕ್ರೈಸ್ತ ಸಮುದಾಯದ ಅಭಿವೃದ್ಧಿ ಗೆ 200 ಕೋಟಿ ರೂ., ಜೈನ ಧಾರ್ಮಿಕ ಕ್ಷೇತ್ರ ಅಭಿವೃದ್ಧಿ ಗೆ 50 ಕೋಟಿ ರೂ. ಬಜೆಟ್ ನಲ್ಲಿ ಒದಗಿಸಿದ್ದು ಅಲ್ಪಸಂಖ್ಯಾತರ ಸಮುದಾಯಗಳ ಪರ ಬದ್ಧತೆ ಯನ್ನು ನಮ್ಮ ಸರ್ಕಾರ ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.