ಬೆಂಗಳೂರು, ಫೆ 16 (DaijiworldNews/AA): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಕಳಪೆ ಬಜೆಟ್ ಮಂಡಿಸಿದ್ದಾರೆ. ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್ ನೋಡಿರಲಿಲ್ಲ. 14 ಬಜೆಟ್ ಗಳನ್ನು ಮಂಡಿಸಿರುವ ಸಿದ್ದರಾಮಯ್ಯರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ 2024-25ನೇ ಸಾಲಿನ ಬಜೆಟ್ ಮಂಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಾರಿಯ ಬಜೆಟ್ ನ ಬಹುತೇಕ ಅಂಶಗಳು ಕೇಂದ್ರವನ್ನು ದೂರಲು ಮೀಸಲು ಇಡಲಾಗಿದೆ. ಈ ಆಯವ್ಯಯವನ್ನು ದೆಹಲಿ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಮಾಡಲಾಗಿದೆ. ವಾಸ್ತವಿಕ ಅಂಕಿ ಸಂಖ್ಯೆ ನೀಡದೇ ಕಾಲ್ಪನಿಕ ಅಂಕಿ ಸಂಖ್ಯೆ ನೀಡಲಾಗಿದೆ. ಈ ಸಾಲಿನ ಬಜೆಟ್ ರಾಜ್ಯದ ಜನರಿಗೆ ಮಾಡಿರುವ ಮೋಸದಂತೆ ಇದೆ ಎಂದು ಕಿಡಿಕಾರಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಜಲಸಂಪನ್ಮೂಲ ಖಾತೆಗೆ ಯಾವುದೇ ಅನುದಾನ ನೀಡಿಲ್ಲ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಮೋಸ ಮಾಡಲಾಗಿದೆ. ಶಿವಕುಮಾರ್ ಅವರು ಮೇಕೆ ದಾಟು ಪಾದಯಾತ್ರೆ ಮಾಡಿದ್ದೇ ಸಾಧನೆಯಾಗಿದೆ. ಕೃಷ್ಣಾ ಕೊಳ್ಳ, ಮಹದಾಯಿ, ನವಿಲೆ ಯೋಜನೆಗೆ, ಬೆಂಗಳೂರು ಅಭಿವೃದ್ಧಿಗೆ ಯಾವುದೇ ವಿಧದ ಅನುದಾನ ನಿಗದಿಯಾಗಿಲ್ಲ ಎಂದರು.
ಈ ಬಾರಿಯ ಬಜೆಟ್ ನಲ್ಲಿ 7ನೇ ವೇತನ ಆಯೋಗದ ಅನುಷ್ಠಾನಕ್ಕೆ ಸ್ಪಷ್ಟ ಘೋಷಣೆ ಇಲ್ಲ. ಜೊತೆಗೆ ಓಪಿಎಸ್ ಪುನರ್ ಜಾರಿ ಬಗ್ಗೆ ವಿಚಾರವೇ ತೆಗೆದಿಲ್ಲ. ವರುಣ ಕ್ಷೇತ್ರಕ್ಕೆ 2,000 ಕೋಟಿ ರೂ. ನೀಡಲಾಗಿದ್ದು, ಬೇರೆಲ್ಲಾ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ. 27,353 ಸಾವಿರ ಕೋಟಿ ರೂ. ರಾಜಸ್ವ ಕೊರತೆ ಬಜೆಟ್ ಮಂಡನೆ ಮಾಡಿರುವುದು, ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತಿರುವ ಸೂಚನೆ ಆಗಿದೆ. ಕಾಂಗ್ರೆಸ್ ಪಕ್ಷದ ಆಡಳಿತದಿಂದ ನಮ್ಮ ರಾಜ್ಯ ದಿವಾಳಿ ಆಗುವುದರಲ್ಲಿ ಯಾವ ಅನುಮಾನ ಕೂಡ ಇಲ್ಲ. ಈ ಬಾರಿ ಮಂಡನೆಯಾಗಿರುವಂತಹ ಬಜೆಟ್ ಹಣಕಾಸು ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ತರುವಂತಹ ಅತ್ಯಂತ ಕಳಪೆ ಬಜೆಟ್ ಆಗಿದೆ ಎಂದು ಮಾಜಿ ಸಿಎಂ ಬಿಎಸ್ ವೈ ತಿಳಿಸಿದ್ದಾರೆ.