ಗುಜರಾತ್, ಫೆ 17 (DaijiworldNews/SK): ಪ್ರತಿಯೊಬ್ಬ ಸಾಧಕರ ಹಿಂದೆಯೂ ಒಂದೊಂದು ರೋಚಕ ಕಥೆ ಇರುತ್ತದೆ. ಇಲ್ಲೊಬ್ಬರು ಅಮಿತಾಭ್ ಬಚ್ಚನ್ ನಡೆಸಿಕೊಟ್ಟ ಗೇಮ್ ಶೋ ಕೌನ್ ಬನೇಗಾ ಕರೋಡ್ಪತಿ ಜೂನಿಯರ್ ಪ್ರಶಸ್ತಿಯನ್ನು ಗೆದ್ದು, ತದನಂತರ ಐಪಿಎಸ್ ಅಧಿಕಾರಿಯಾಗಬೇಕೆಂಬ ಬಾಲ್ಯ ಕನಸನ್ನು ನನಸಾಗಿಸಲು ಸ್ವಯಂ ಅಧ್ಯಯ ಆಯ್ಕೆ ಮಾಡಿ ಐಪಿಎಸ್ ಅಧಿಕಾರಿಯಾದ ರವಿ ಮೋಹನ್ ಸೈನಿ ಯಶೋಗಾಥೆ.
ರವಿ ಮೋಹನ್ ಸೈನಿ ಅವರ ತಂದೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದವರು. ಶಾಲಾ ದಿನಗಳಲ್ಲಿಂದಲೂ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ರವಿ ಅವರು 10 ತರಗತಿಯಲ್ಲಿದ್ದಾಗ ಅಮಿತಾಭ್ ಬಚ್ಚನ್ ನಡೆಸಿಕೊಟ್ಟ ಗೇಮ್ ಶೋ ಕೌನ್ ಬನೇಗಾ ಕರೋಡ್ಪತಿ ಜೂನಿಯರ್ ಭಾಗವಹಿಸಿದ್ದರು. ಈ ಗೇಮ್ ಶೋನಲ್ಲಿ 15 ಕಠಿಣ ಪ್ರಶ್ನೆಗಳಿಗೆ ಉತ್ತರಿಸಿದ ರವಿ ಅವರು 1 ಕೋಟಿ ಗೆದ್ದು, ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ಸುದ್ದಿಯಾಗಿದ್ದರು.
ಇದಾದ ಬಳಿಕ ರವಿ ಮೋಹನ್ ಅವರು ಜೈಪುರ್ ದ ಮಹಾತ್ಮ ಗಾಂಧಿ ಮೆಡಿಕಲ್ ಕಾಲೇಜ್ ಎಂಬಿಬಿಎಸ್ ಪದವಿಯನ್ನು ಪಡೆದರು. ಇನ್ನು ಬಾಲ್ಯದಿಂದಲೂ ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ರವಿ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ಸ್ವಯಂ ಅಧ್ಯಯನ ನಡೆಸಲು ಮುಂದಾದರು.
ಇನ್ನು ರವಿ ಮೋಹನ್ ಸೈನಿ ಅವರು 2012 ರಲ್ಲಿ ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ಮುಂದಾದರು. ಈ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪಾಸ್ ಮಾಡಿದ್ದರು. ಆದರೆ ಮೇನ್ಸ್ ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಾಧ್ಯವಾಗದ್ದಕ್ಕೆ ಮೋಹನ್ ಸೈನಿ ನಿರಾಶೆಗೊಳ್ಳಲ್ಲಿಲ್ಲ. ಬದಲಾಗಿ, 2013 ರಲ್ಲಿ ಮತ್ತೊಮ್ಮೆ ಯುಪಿಎಸ್ ಪರೀಕ್ಷೆ ತೆಗೆದುಕೊಂಡು ಅದನ್ನು ಪೂರ್ಣಗೊಳಿಸಿ ಭಾರತೀಯ ಪೋಸ್ಟ್ ಮತ್ತು ಟೆಲಿಕಾಂ, ಖಾತೆಗಳು ಮತ್ತು ಹಣಕಾಸು ಸೇವೆಗಳಿಗೆ ಆಯ್ಕೆಯಾದರು.
ಆದರೆ, ಅವರಿಗೆ ಇನ್ನಷ್ಟು ಉತ್ತಮ ರ್ಯಾಂಕ್ ಪಡೆಯಬೇಕೆಂಬ ಆಸೆ ಇದ್ದ ಕಾರಣ. 2014 ರಲ್ಲಿ, ಮತ್ತೊಮ್ಮೆ ಪರೀಕ್ಷೆಯಲ್ಲಿ ಬರೆದು ಯುಪಿಎಸ್ ಸಿ ಪರೀಕ್ಷೆಯಲ್ಲಿ 461 ನೇ ಸ್ಥಾನ ಪಡೆದು ಭಾರತೀಯ ಪೊಲೀಸ್ ಸೇವೆಗಳಿಗೆ (IPS) ಅರ್ಹತೆ ಪಡೆದು ಪ್ರಸ್ತುತ ಸೈನಿ ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿಯಾಗುವ ಮೂಲಕ ಪ್ರೇರಣೆಯಾಗಿದ್ದಾರೆ.