ದೆಹಲಿ ಫೆ 17(DaijiworldNews/AK): ಖ್ಯಾತ ಉರ್ದು ಕವಿ ಗುಲ್ಜಾರ ಹಾಗೂ ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಶನಿವಾರ ಪ್ರಕಟಿಸಿದೆ.
ಗುಲ್ಜಾರ್ ಅವರು ಹಿಂದಿ ಚಿತ್ರರಂಗದಲ್ಲಿ ಸಿನಿಮಾ ಸಾಹಿತಿ, ಗೀತೆ ರಚನೆಕಾರರಾಗಿ ಗುರುತಿಸಿಕೊಂಡಿದ್ದು, ಅತ್ಯುತ್ತಮ ಉರ್ದು ಕವಿಗಳಲ್ಲಿ ಒಬ್ಬರು. ಗಜಲ್ ಮತ್ತು ಕಾವ್ಯ ಕ್ಷೇತ್ರದಲ್ಲಿ ಖ್ಯಾತಿಯನ್ನು ಗಳಿಸಿರುವ ಗುಲ್ಜಾರ್ ಅವರ ನಿಜವಾದ ಹೆಸರು ಸಂಪೂರ್ಣ ಸಿಂಗ್ ಕಲ್ರಾ. ಅವಿಭಜಿತ ಭಾರತದ ಝೇಲಂ ಜಿಲ್ಲೆಯ ದೇನಾ ಗ್ರಾಮದಲ್ಲಿ 18 ಆಗಸ್ಟ್ 1934 ರಂದು ಜನಿಸಿದ ಗುಲ್ಜಾರ್ ಅವರಿಗೆ ಸಾಹಿತ್ಯದಲ್ಲಿ ಅಪಾರ ಪ್ರೀತಿ.
ರವೀಂದ್ರನಾಥ ಟ್ಯಾಗೋರ್ ಮತ್ತು ಶರತ್ ಚಂದ್ ಅವರ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ, ಪ್ರೀತಿ ಹೊಂದಿದ್ದ ಗುಲ್ಜಾರ್ ಅವರಿಗೆ 002 ರಲ್ಲಿ ಉರ್ದುಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2004 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಗುಲ್ಜಾರ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಶಸ್ತಿಗೆ ಭಾಜನರಾದ ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯರು ಹೆಸರಾಂತ ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ ಮತ್ತು 100 ಕ್ಕೂ ಹೆಚ್ಚು ಪುಸ್ತಕಗಳ ಬರಹಗಾರರಾಗಿದ್ದಾರೆ. ಜನಿಸಿದ 2 ತಿಂಗಳಲ್ಲೇ ದೃಷ್ಟಿ ಕಳೆದುಕೊಂಡ ಅವರು ಅತ್ಯುತ್ತಮ ಶಿಕ್ಷಕ ಮತ್ತು ಸಂಸ್ಕೃತ ಭಾಷಾ ಪಂಡಿತರಾಗಿದ್ದಾರೆ. ರಾಮಭದ್ರಾಚಾರ್ಯರಿಗೆ ಭಾರತ ಸರ್ಕಾರ 2015 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಸಂಸ್ಕೃತ ಸಾಹಿತಿ ಜಗದ್ಗುರು ರಾಮಭದ್ರಾಚಾರ್ಯ ಮತ್ತು ಪ್ರಸಿದ್ಧ ಉರ್ದು ಸಾಹಿತಿ ಗುಲ್ಜಾರ್ ಎಂಬ ಎರಡು ಭಾಷೆಗಳ ಖ್ಯಾತ ಬರಹಗಾರರಿಗೆ (2023 ಕ್ಕೆ) ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಜ್ಞಾನಪೀಠದ ಆಯ್ಕೆ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.