ಪಂಜಾಬ್, ಫೆ 18(DaijiworldNews/AA): ಕೆಲವೊಮ್ಮೆ ನಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಮಗೆ ದೊರೆತ ಕೆಲವು ಅವಕಾಶಗಳನ್ನು ತ್ಯಜಿಸಬೇಕಾಗುತ್ತದೆ. ಹೀಗೆ ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತು 36 ಲಕ್ಷ ಸಂಬಳದ ಕೆಲಸವನ್ನ ತ್ಯಜಿಸಿ ಯುಪಿಎಸ್ ಸಿ ಬರೆದು ಐಪಿಎಸ್ ಅಧಿಕಾರಿಯಾದ ರಾಬಿನ್ ಬನ್ಸಾಲ್ ಅವರ ಯಶೋಗಾಥೆ ಇದು.
ರಾಜಸ್ಥಾನದ ಸಂಗ್ರೂರ್ ನಲ್ಲಿ ಹುಟ್ಟಿ ಬೆಳೆದ ರಾಬಿನ್ ಬನ್ಸಾಲ್ ಅವರ ತಂದೆ ಅರ್ಥಶಾಸ್ತ್ರ ಉಪನ್ಯಾಸಕರು. ಹಾಗೂ ತಾಯಿ ಗೃಹಿಣಿ. ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಆ ಬಳಿಕ ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಪ್ರವೇಶ ಪಡೆಯುತ್ತಾರೆ.
ರಾಬಿನ್ ಅವರು ಬಿಟೆಕ್ ಮುಗಿಸಿದ ನಂತರ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಗಳಿಸುತ್ತಾರೆ. ಈ ಉದ್ಯೋಗದಲ್ಲಿ ಅವರು ವರ್ಷಕ್ಕೆ 36 ಲಕ್ಷ ರೂ. ಸಂಬಳ ಪಡೆಯುತ್ತಿರುತ್ತಾರೆ. ರಾಬಿನ್ ಅವರು ಕೆಲಸಕ್ಕೆ ಸೇರಿದ ಒಂದು ವರ್ಷದ ಬಳಿಕ ಜನರ ಸೇವೆ ಮಾಡುವ ಮನಸ್ಸಾಗುತ್ತದೆ. ಅದಕ್ಕಾಗಿ ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡಿ ಲಕ್ಷಾಂತರ ರೂ. ಸಂಬಳದ ಕೆಲಸವನ್ನು ತ್ಯಜಿಸುತ್ತಾರೆ. ನಂತರ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಾರೆ.
ರಾಬಿನ್ ಅವರು ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಬಳಿಕ 2022 ರಲ್ಲಿ ನಾಲ್ಕನೇ ಬಾರಿ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗುತ್ತಾರೆ. ಜೊತೆಗೆ 135ನೇ ಅಖಿಲ ಭಾರತ ರ್ಯಾಂಕ್ ಅನ್ನು ಕೂಡ ಗಳಿಸುತ್ತಾರೆ. ಈ ಮೂಲಕ ಅದೆಷ್ಟೋ ಯುಪಿಎಸ್ ಸಿ ಅಧಿಕಾರಿಗಳಿಗೆ ಪ್ರೇರಣೆಯಾಗಿದ್ದಾರೆ.