ವಿಜಯಪುರ, ಫೆ 18(DaijiworldNews/SK): ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 15ನೇ ಬಜೆಟ್ ರಾಜ್ಯದ ಸಾಮಾಜಿಕ ಹಾಗೂ ಅಭಿವೃದ್ಧಿಯನ್ನು ಸರಿದೂಗಿಸುವ ಬಜೆಟ್ ಆಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್ ಅವರು, ಕೇಂದ್ರ ಸರ್ಕಾರ ಮಾಡಿದ ಅನ್ಯಾಯದ ನಡುವೆಯು ರಾಜ್ಯದಿಂದ ಉತ್ತಮ ಬಜೆಟ್ ನೀಡಲಾಗಿದ್ದು, ಗ್ಯಾರಂಟಿಗಳಿಗೆ 56,000 ಕೋಟಿ ರೂ. ಜೊತೆಗೆ ಇತರೆ ಯೋಜನೆಗಳಿಗೂ ಹಣ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಬೆಂಗಳೂರು ಅಭಿವೃದ್ಧಿಯಿಂದ ಹಿಡಿದು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದಿದ್ದಾರೆ.
ಇನ್ನು ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಿದೆ. ಆದರೂ ಕೇಂದ್ರದಿಂದ ಹಣ ಬಂದಿಲ್ಲ. ಸಿಎಂ ಬಜೆಟ್ ಮೂಲಕ ಶ್ವೇತ ಪತ್ರ ಹೊರಡಿಸಿದ್ದಾರೆ. ಆದರೆ ಬಜೆಟ್ ಮಂಡನೆಯಲ್ಲಿ ಬಿಜೆಪಿಯವರು 10 ನಿಮಿಷ ಕೂಡ ಇರಲಿಲ್ಲ. ಕೇಂದ್ರದ ಬಂಡವಾಳ ಹೊರ ಬೀಳುತ್ತದೆ ಎಂದು ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.