ರಾಯ್ ಪುರ್, ಫೆ 18(DaijiworldNews/AA): ಸಶಸ್ತ್ರ ಪಡೆ (ಸಿಎಎಫ್) ಕಮಾಂಡರ್ ಓರ್ವರನ್ನು ಮಾವೋವಾದಿಗಳು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿನ ನಕ್ಸಲ್ ನಿಗ್ರಹ ಪಡೆಯ ಶಿಬಿರದ ಸಮೀಪ ನಡೆದಿದೆ.
ಕಮಾಂಡರ್ ತೇಜು ರಾಮ್ ಭುರ್ಯ ಮಾವೋವಾದಿಗಳಿಂದ ಹತ್ಯೆಯಾದ ಕಮಾಂಡರ್.
ಕಮಾಂಡರ್ ತೇಜು ಅವರು ತಮ್ಮ ಶಿಬಿರದಿಂದ ಸಿಬ್ಬಂದಿಯೊಂದಿಗೆ ತರಕಾರಿ ತರಲೆಂದು ಹತ್ತಿರದ ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ, ಮಾವೋವಾದಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭ ಕಮಾಂಡರ್ ತೇಜು ಅವರಿಗೆ ನಕ್ಸಲರು ಕೊಡಲಿಯಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಹೆಚ್ಚುವರಿ ಸೇನೆ ಘಟನಾ ಸ್ಥಳಕ್ಕೆ ತೆರಳಿದ್ದು, ಅಷ್ಟರಲ್ಲಾಗಲೇ ಮಾವೋವಾದಿಗಳ ತಂಡ ಪರಾರಿಯಾಗಿದೆ ಎನ್ನಲಾಗಿದೆ.
ಕಮಾಂಡರ್ ತೇಜು ಅವರು ಓರ್ವ ಅನುಭವಿ ಅಧಿಕಾರಿಯಾಗಿದ್ದು, ಛತ್ತೀಸ್ಗಢದ ವಿವಿಧ ಭಾಗಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ದಾಳಿ ಮಾಡಿದ ಮಾವೋವಾದಿಗಳ ಪತ್ತೆಗಾಗಿ ಸಿಎಎಫ್ ಹಾಗೂ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.