ಮಂಡ್ಯ, ಫೆ 18(DaijiworldNews/AK): ಕರ್ನಾಟಕಕ್ಕೆ ತೆರಿಗೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು ಹೇಳುತ್ತಾರೆ. ಈ ದ್ರೋಹದ ವಿರುದ್ಧ ಅವರಿಗೆ ಪಾಠ ಕಲಿಸಬೇಕು ಎಂದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಮಳವಳ್ಳಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಸರ್ಕಾರದ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿ,
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನವರು ಏನೇ ಆಮಿಷಗಳನ್ನು ತೋರಿಸಿದರೂ ಕೂಡ ಅದಕ್ಕೆ ಮಣಿಯದೇ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಮಳವಳ್ಳಿಯಲ್ಲಿ ನೀಡಿದ್ದ ಭರವಸೆಯಂತೆ 470 ಕೋಟಿ ರೂ.ಗಳ ಅಂದಾಜು ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕಳೆದ ಚುನಾವಣೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಗಳನ್ನು ಎಂಟು ತಿಂಗಳಲ್ಲಿ ಜಾರಿ ಮಾಡಿ ಭರವಸೆ ಈಡೇರಿಸಿದ್ದೇವೆ ಎಂದರು. ಬಿಜೆಪಿ, ಜೆಡಿಎಸ್ ನಂತೆ ನಾವು ಮಾತಿಗೆ ತಪ್ಪುವವರಲ್ಲ. ಬಿಜೆಪಿ, ಜೆಡಿಎಸ್ ಈಗ ಒಂದಾಗಿದ್ದಾರೆ. ಆದರೆ ಹಿಂದೊಮ್ಮೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನ ನಾಗಿ ಹುಟ್ಟುತ್ತೇನೆ ಎಂದಿದ್ದರು.
ಈಗ ಕೋಮುವಾದಿ ಬಿಜೆಪಿ ಯವರ ಜೊತೆಗೆ ಸೇರಿದ್ದಾರೆ. ಈಗ ನಾನೇ ಮಗನನ್ನು ಬಿಜೆಪಿಗೆ ಕಳುಹಿಸಿದೆ ಎನ್ನುತ್ತಾರೆ. ನಿಮ್ಮ ಜನತಾದಳ ಜಾತ್ಯಾತೀತ ದಲ್ಲಿ ಜಾತ್ಯಾತೀತ ಎನ್ನುವ ಪದ ತೆಗೆಯಿರಿ.ಹಾಗೆ ಇಟ್ಟುಕೊಳ್ಳಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದರು.ಬಿಜೆಪಿ ಢೋಂಗಿತನದ ಮಾತುಗಳನ್ನು ಆಡುತ್ತಾರೆ. 28 ಕ್ಕೆ 28 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲಿದೆ. ನೀವು ಆಶೀರ್ವಾದ ಮಾಡುತ್ತೀರಿ ಎಂದು ನಂಬಿಕೆ ಇದೆ ಎಂದರು.
155 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಜೂನ್ 11 ರಿಂದ ಈವರೆಗೆ ಶಕ್ತಿ ಯೋಜನೆಯಡಿ 155 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರತಿದಿನ 60 ಲಕ್ಷ ಮಹಿಳೆಯರು ಓಡಾಡುತ್ತಿದ್ದಾರೆ ಎಂದು ವಿವರಿಸಿದರು.
ಜನರು ಹಸಿದು ಮಲಗಬಾರದು, ರಾಜ್ಯ ಹಸಿವುಮುಕ್ತವಾಗಬೇಕೆಂದು ಅನ್ನಭಾಗ್ಯ ಜಾರಿ ಮಾಡಲಾಯಿತು. ಬಡವರಿಗೆ ಅಕ್ಕಿ ನೀಡದ ಕೇಂದ್ರದ ಬಿಜೆಪಿ ಪಕ್ಷಕ್ಕೆ ಜನರು ಮತ ಹಾಕಬಾರದು ಎಂದರು.