ಹರಿಯಾಣ, ಫೆ 19(DaijiworldNews/AA): ಬಾಳಿನಲ್ಲಿ ಸೋಲು ಗೆಲುವು ಸಹಜ. ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಬಾಳುವುದನ್ನು ಕಲಿಯಬೇಕು. ಹೀಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣನಾದೆಂದು ಕುಗ್ಗದೆ ಎರಡನೇ ಬಾರಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಆಶಿಮಾ ಗೋಯಲ್ ಅವರ ಸ್ಪೂರ್ತಿದಾಯಕ ಕತೆ ಇದು.
ಆಶಿಮಾ ಗೋಯಲ್ (26) ಅವರು ಮೂಲತಃ ಹರಿಯಾಣದ ಬಲ್ಲಬ್ಗಢ ಪಟ್ಟಣದವರು. ಆಶಿಮಾ ಅವರ ತಂದೆ ಸೈಬರ್ ಕೆಫೆಯನ್ನು ನಡೆಸುತ್ತಿದ್ದರು. ಹಾಗೂ ಅವರ ತಾಯಿ ಗೃಹಿಣಿ. ಇನ್ನು ಆಶಿಮಾ ಅವರಿಗೆ ಓರ್ವ ಸಹೋದರಿ ಇದ್ದು, ಅವರು ಪ್ರಸ್ತುತ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಬಾಲ್ಯದಿಂದಲೂ ಅಧ್ಯಯನದಲ್ಲಿ ಅತ್ಯುತ್ತಮವಾಗಿದ್ದ ಆಶಿಮಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸುತ್ತಿದ್ದರು. ಆಶಿಮಾ ಅವರು ದೆಹಲಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಬಳಿಕ ಅವರು ಎಂ ಟೆಕ್ ಕೋರ್ಸ್ ಜೊತೆಗೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸುತ್ತಾರೆ.
ತನ್ನ ಕಾಲೇಜು ವ್ಯಾಸಂಗ ಮುಗಿದ ಬಳಿಕ ಆಶಿಮಾ ಅವರಿಗೆ ಬೆಂಗಳೂರಿನಲ್ಲಿ ಕಾರ್ಪೋರೇಟ್ ಕಂಪನಿಯಲ್ಲಿ ಉದ್ಯೋಗ ಪಡೆಯುತ್ತಾರೆ. ಇನ್ನು ಅದೇ ವರ್ಷ, ಅಂದರೆ 2018 ರಲ್ಲಿ ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ಆಶಿಮಾ ಅವರು ತಯಾರಿ ನಡೆಸುತ್ತಿರುತ್ತಾರೆ. ಆದರೆ ತಮ್ಮ ಸಂಪೂರ್ಣ ಸಮಯವನ್ನು ಯುಪಿಎಸ್ ಸಿ ಪರೀಕ್ಷೆಗೆ ಮೀಸಲಿಡಲು ಹಾಗೂ ಪರೀಕ್ಷೆಗಾಗಿ ಸಿದ್ಧತೆ ನಡೆಸಲು, ಆಶಿಮಾ ಅವರು ಉತ್ತಮ ವೇತನದ ಉದ್ಯೋಗವನ್ನು ತೊರೆಯುತ್ತಾರೆ.
ಆಶಿಮಾ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ಯಾವುದೇ ತರಬೇತಿ ಪಡೆಯದೆ ಸ್ವಯಂ ಅಧ್ಯಯನ ನಡೆಸುತ್ತಿರುತ್ತಾರೆ. ಆಶಿಮಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಆದರೆ ಇದರಿಂದ ಕುಗ್ಗದೇ 2019 ರಲ್ಲಿ ಎರಡನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಆಶಿಮಾ ಅವರು 65 ನೇ ಅಖಿಲ ಭಾರತ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗುತ್ತಾರೆ. ಈ ಮೂಲಕ ತನ್ನ ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.