ಬೆಂಗಳೂರು,ಫೆ 19 (DaijiworldNews/ AK): ಕರ್ನಾಟಕದ ಎಲ್ಲ ವಸತಿ ಶಾಲೆಗಳ ಪ್ರವೇಶ ದ್ವಾರದ ‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ ಘೋಷ ವಾಕ್ಯವನ್ನು ಬದಲಾಯಿಸಿರುವ ಸಮಾಜ ಕಲ್ಯಾಣ ಇಲಾಖೆ ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ತಪ್ಪನ್ನು ತಿದ್ದುಕೊಂಡಿದೆ. ಈ ನಡುವೆ ಸಮಾಜ ಕಲ್ಯಾಣ ಪ್ರಧಾನ ಕಾರ್ಯದರ್ಶಿ ಮಣಿಮಣ್ಣನ್ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯಿಂದ ಅವರನ್ನು ಎತ್ತಂಗಡಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮಣಿವಣ್ಣನ್ ಪ್ರಧಾನ ಕಾರ್ಯದರ್ಶಿಯಾಗಿ ಬದಲಾವಣೆಯಾಗಿದ್ದಾರೆ ಎಂದು ಪ್ರಪಂಚವೇ ಬದಲಾಗಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ.
ಇವರು ಧೈರ್ಯದಿಂದ ಪ್ರಶ್ನಿಸಿ ಅಂದ್ರೆ ಪ್ರಶ್ನೆ ಮಾಡೋದು ಎಲ್ಲಿ? ಕುವೆಂಪು ವೇದವಾಕ್ಯವನ್ನು ತೆಗೆದು ಹಾಕುವಂಥದ್ದು ಇದು ಕೆಟ್ಟ ಸಂಸ್ಕೃತಿ. ಇಡೀ ಸರ್ಕಾರ ಇದರ ಹಿಂದೆ ಇದೆ ಅಂತಾ ಅನ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕುವೆಂಪು ವೇದವಾಕ್ಯವನ್ನು ತೆಗೆದು ಮಣಿವಣ್ಣನ್ ಅವರ ವೇದವಾಕ್ಯವನ್ನು ಹಾಕಿದ್ದಾರೆ. ಸರ್ಕಾರದ ಆದೇಶ ಎಲ್ಲಿದೆ?, ಮಂತ್ರಿಗಳ ಆದೇಶ ಎಲ್ಲಿದೆ? ಇದುವರೆಗೂ ಮಂತ್ರಿಗಳ ಆದೇಶದ ಪ್ರತಿ ನಮಗೆ ಸಿಕ್ಕಿಲ್ಲ. ಒಬ್ಬ ಪ್ರಧಾನ ಕಾರ್ಯದರ್ಶಿ ಹುಚ್ಚುಚ್ಚಾಗಿ ಅವನಿಗೆ ಮನಸ್ಸಿಗೆ ಬಂದ ಹಾಗೆ ಚೇಂಜ್ ಮಾಡಿದ್ದಾನೆ. ಈಗ ವಿಧಾನಸೌಧದ ಮುಂದೆ ಸರ್ಕಾರದ ಕೆಲಸ ದೇವರ ಕೆಲಸ ಅಂತ ಇದೆ. ಯಾರೋ ಕಾರ್ಯದರ್ಶಿ ಬಂದು ಅದನ್ನ ಅಳಿಸು ಹಾಕಿ ಅಂದ್ರೆ ಏನು ಅರ್ಥ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಡುಗಾಲ ಬಂದಿರುವ ಈ ಸರ್ಕಾರ ಆದೇಶ ಇಲ್ಲದೇ ನಾಮಫಲಕ ಬದಲಾಯಿಸಿದ್ದಾರೆ. ಯಾವ ಅಧಿಕಾರಿಗಳೂ ಸರ್ಕಾರದ ಮಾತು ಕೇಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.