ಅಮೇಥಿ, ಫೆ 19 (DaijiworldNews/HR): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಮಾಡಿದ್ದು, ಈ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಮಣಿಪುರ ಹೊತ್ತಿ ಉರಿಯುತ್ತಿದೆ. ಅಲ್ಲಿ ಮೋದಿ ಸರ್ಕಾರ ಎರಡು ವರ್ಗಗಳ ನಡುವೆ ಹೋರಾಟ ಸೃಷ್ಟಿಸಿದೆ. ಜನರನ್ನು ಕೊಲ್ಲಲಾಗಿದೆ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೆ ಇಲ್ಲಿಯವರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದರು.
ಇನ್ನು ಇಂದು ದೇಶದ ಯುವಕರು ಮೊಬೈಲ್ ಫೋನ್ಗಳಲ್ಲಿ ಗಂಟೆಗಟ್ಟಲೆ ವಿಡಿಯೋಗಳನ್ನು ನೋಡುತ್ತಲೇ ಇರುತ್ತಾರೆ ಮತ್ತು ಪರಸ್ಪರ ವಿಡಿಯೋಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಆದರೆ ಅದಾನಿ-ಅಂಬಾನಿ ಪುತ್ರರು ಮೊಬೈಲ್ ನಲ್ಲಿ ವಿಡಿಯೋ ನೋಡುವುದಿಲ್ಲ, ಹಣ ಎಣಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬ್ಯಾಟ್ ಹಿಡಿಯಲು ಗೊತ್ತಿಲ್ಲದ ಅಮಿತ್ ಶಾ ಅವರ ಮಗ ಇಂದು ಭಾರತೀಯ ಕ್ರಿಕೆಟ್ ನಡೆಸುತ್ತಿದ್ದಾರೆ. ಇದು ಈ ದೇಶದ ಸತ್ಯ ಎಂದಿದ್ದಾರೆ.