ಶಿಮ್ಲಾ, ಫೆ 20(DaijiworldNews/SK): ಹಿಮಾಚಲ ಪ್ರದೇಶದ ಬುಡಕಟ್ಟು ಪ್ರದೇಶಗಳಲ್ಲಿ ಹಾಗೂ ಎತ್ತರದ ಬೆಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಹಿಮಪಾತದಿಂದಾಗಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಕನಿಷ್ಠ 228 ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕಳೆದ ೨೪ ಗಂಟೆಗಳಲ್ಲಿ ರೋಹ್ಟಾಂಗ್ ಪಾಸ್ ಪ್ರದೇಶದಲ್ಲಿ 135 ಸೆಂ.ಮೀ ಹಿಮಪಾತವಾಗಿದ್ದು, ಕಿಲ್ಲರ್ (ಪಾಂಗಿ) 90 ಸೆಂ.ಮೀ, ಚಿತ್ಕುಲ್ ಮತ್ತು ಜಲೋರಿ ಜೋಟ್ 45 ಸೆಂ.ಮೀ, ಹಾಗೂ ಕುಕುಮ್ ಸೇರಿ 44 ಸೆಂ.ಮೀ ಮತ್ತು ಗೊಂಡ್ಲಾದಲ್ಲಿ 39 ಸೆಂ.ಮೀ ಹಿಮಪಾತವಾಗಿದೆ ಎಂದು ವರದಿಯಾಗಿದೆ.
ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಹಿಮಪಾತದಿಂದ ರಾಜ್ಯದ ಡಾಲ್ಹೌಸಿ, ಸೋಲನ್, ಶಿಮ್ಲಾ ಮತ್ತು ಧರ್ಮಶಾಲಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಹಮೀರ್ಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಇಂದು ಬೆಳಿಗ್ಗೆ ಗುಡುಗು ಸಹಿತ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಇನ್ನು ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಒಟ್ಟು 165 ರಸ್ತೆಗಳನ್ನು ಮತ್ತು ಚಂಬಾದ 52 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದ್ದು, ನಾಳೆಯು ಲಾಹೌಲ್, ಸ್ಪಿತಿ, ಕಿನ್ನೌರ್, ಚಂಬಾ ಮತ್ತು ಕುಲ್ಲುವಿನ ಎತ್ತರದ ಬೆಟ್ಟಗಳು, ಚಂಬಾ, ಮಂಡಿ ಮತ್ತು ಶಿಮ್ಲಾಗಳಲ್ಲಿ ಹೆಚ್ಚಿನ ಹಿಮಪಾತ ಮತ್ತು ಮಳೆ ಬೀಳಲಿದೆ ಎಂದು ಸ್ಥಳೀಯ ಹವಾಮಾನ ಕೇಂದ್ರವು ಮುನ್ಸೂಚನೆ ನೀಡಿದೆ.