ಹುಬ್ಬಳ್ಳಿ, ಫೆ 20(DaijiworldNews/SK): ದೇಶದಲ್ಲಿ ಬಡತನ ನಿರ್ಮೂಲನೆ ಮಾಡುತ್ತೇವೆ, ನಾವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ ಎಂದು ಸ್ವಲ್ಪ ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಭಾರತದಲ್ಲಿ ಎಷ್ಟು ಜನ ಬಡತನದಿಂದ ಹೊರ ಬಂದಿದ್ದಾರೆ? ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಕಾಂಗ್ರೆಸ್ನ ದುರಾಡಳಿತದಿಂದ ಭಾರತ ಒಂದು ಚೂರು ಪ್ರಗತಿ ಕಂಡಿಲ್ಲ. ಕಾಂಗ್ರೆಸ್ ಅಧಿಕಾರ ಬಿಟ್ಟು ಕೊಟ್ಟಾಗ ದೇಶದ ಆರ್ಥಿಕ ಸ್ಥಿತಿ 10ನೇ ಸ್ಥಾನದಲ್ಲಿತ್ತು. ಈಗ 4ನೇ ಸ್ಥಾನದಲ್ಲಿದೆ. ಇನ್ನೂ ಎರಡು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಬರುತ್ತದೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಗೆ ಅಯೋಧ್ಯೆಯಲ್ಲಿ ರಾಮಮಂದಿರವನ್ನೂ ಸಹ ನಿರ್ಮಾಣ ಮಾಡೋದಕ್ಕೆ ಆಗಿಲ್ಲ. ಬಿಜೆಪಿ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿತ್ತು, ಈಗ ನಿರ್ಮಾಣ ಮಾಡಿದ್ದೇವೆ. ರಾಮಮಂದಿರ ಕಟ್ಟಬೇಕಾದ ಜಾಗದಲ್ಲಿ ಕಟ್ಟಿಲ್ಲ ಎನ್ನುವ ಸಚಿವ ಸಂತೋಷ್ ಲಾಡ್ ಅವರು ಯಾಕೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.