ನವದೆಹಲಿ, ಫೆ 20(DaijiworldNews/ AK): ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವುದಕ್ಕೆ ಕಾನೂನು ಬದ್ಧ ಗ್ಯಾರಂಟಿ ಹಾಗೂ ರೈತರ ಸಾಲ ಮನ್ನಾ ಸೇರಿದಂತೆ ರೈತರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ರೈತ ನಾಯಕ ಸರ್ವನ್ ಸಿಂಗ್ ಪಂಧೇರ್ ಆಗ್ರಹಿಸಿದ್ದಾರೆ.ಈ ಮಧ್ಯೆ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರೈತ ಮುಖಂಡರು, ಫೆ.21 ರಂದು ದೆಹಲಿಗೆ ತೆರಳುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರ ಮುಂದಿಟ್ಟಿದ್ದ ಬೇಡಿಕೆ ಪ್ರಸ್ತಾವನೆಯ ಬಗ್ಗೆ ಚರ್ಚೆ ನಡೆಸಿದ ಬಳಿಕ ರೈತರು ಕೆಂದ್ರದ ಪ್ರಸ್ತಾವನೆಯನ್ನುತಿರಸ್ಕರಿಸಿದ್ದಾರೆ ಎನ್ನಲಾಗಿದೆ. ದೆಹಲಿ ಚಲೋ ಪ್ರತಿಭಟನೆಯ ನೇತೃತ್ವವನ್ನು . ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾವಹಿಸಿದೆ
ಮಂಗಳವಾರ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾ ಪ್ರತಿನಿಧಿಸುವ ಪಂಧೇರ್, ರೈತರಿಗೆ ಮೂರು ದೊಡ್ಡ ಬೇಡಿಕೆಗಳಿವೆ. ಎಲ್ಲಾ ಬೆಳೆಗಳಿಗೆ ಎಂಎಸ್ಪಿ ಮೇಲೆ ಕಾನೂನು ಖಾತರಿಪಡಿಸುವುದು “ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಸಿ 2 ಪ್ಲಸ್ ಶೇ.50 ಅನುಷ್ಠಾನಗೊಳಿಸುವ ಸೂತ್ರ ಮತ್ತು ಸಾಲ ಮನ್ನಾ ಈ ಬೇಡಿಕೆಗಳಾಗಿವೆ ಎಂದು ತಿಳಿಸಿದ್ದಾರೆ.
ಅಲ್ಲದೇ ಈಗಿನ ಪ್ರಧಾನಿ ಬಲಿಷ್ಠ ಪ್ರಧಾನಿ ಎಂದು ಬಿಜೆಪಿ ಹೇಳಿಕೊಂಡಿದೆ. ಅವರು 80 ಕೋಟಿ ರೈತರು ಮತ್ತು ರೈತ ಕಾರ್ಮಿಕರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದರೆ, ಅವರು ನಿಜವಾಗಿಯೂ ಬಲಿಷ್ಠ ಪ್ರಧಾನಿ ಎಂಬ ಬಿಜೆಪಿಯ ಹೇಳಿಕೆಯನ್ನು ಸಾಬೀತುಪಡಿಸುತ್ತದೆ ಎಂದು ಪಂಧೇರ್ ಸವಾಲೆಸಿದ್ದಾರೆ.