ಹೈದರಾಬಾದ್, ಫೆ 21(DaijiworldNews/AA): ಆಂಧ್ರಪ್ರದೇಶದ ಆಡಾಳಿತಾರೂಢ ವೈಎಸ್ಆರ್ಸಿಪಿ ಪಕ್ಷದ ಸಂಸದರಾದ ವೇಮಿರೆಡ್ಡಿ ಪ್ರಭಾಕರ್ ರೆಡ್ಡಿ(ವಿಪಿಆರ್) ಅವರು ರಾಜೀನಾಮೆ ನೀಡಿದ್ದಾರೆ.
ವಿಪಿಆರ್ ಅವರು ಇದೀಗ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರೆಡ್ಡಿ ಅವರು ಓರ್ವ ಉದ್ಯಮಿಯಾಗಿದ್ದು, ಅವರು 2018 ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ರೆಡ್ಡಿ ಅವರು 6 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದು, ವೈಎಸ್ಆರ್ಸಿಪಿ ಟಿಕೆಟ್ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ರೆಡ್ಡಿ ಅವರು ನೆಲ್ಲೂರು ಕ್ಷೇತ್ರದಿಂದ ಸ್ಪರ್ಧಿಸಬೇಕಾಗಿತ್ತು. ಆದರೆ ಪಕ್ಷವು ತನ್ನ ಸಂಸತ್ತಿನ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ತನ್ನೊಂದಿಗೆ ಸಮಾಲೋಚಿಸದೆ ಆಯ್ಕೆ ಮಾಡಿತ್ತು. ಈ ಹಿನ್ನೆಲೆ ರೆಡ್ಡಿ ಅವರು ಬೇಸರಗೊಂಡಿದ್ದಾರೆ. ಇನ್ನು ರೆಡ್ಡಿ ಅವರು ಮಾಜಿ ಸಿಎಂ ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದು, ಅವರು ನೆಲ್ಲೂರು ಸಂಸತ್ ಸ್ಥಾನದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.