ಬೆಂಗಳೂರು, ಫೆ 22 (DajiworldNews/AA): ಭಕ್ತರ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಪಾಲು ಕಸಿಯುವ ಬದಲು ‘ಸರ್ಕಾರ ನಡೆಸಲು ನೆರವಾಗಿ’ ಎಂದು ದೇವಸ್ಥಾನಗಳ ಬಳಿ ಹುಂಡಿಗಳನ್ನು ಇಡಲಿ ಸಹಾನುಭೂತಿ ಮನಸ್ಸಿನ ಭಕ್ತರು ನಿಮ್ಮ ಸರ್ಕಾರಕ್ಕೆ ಕಾಣಿಕೆ ನೀಡಲೂ ಬಹುದು? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರಣೀ ರೂಪದಲ್ಲಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಇದೀಗ ಕಾಂಗ್ರೆಸ್ ಸರ್ಕಾರ ತನ್ನ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೂ ವಕ್ರ ದೃಷ್ಟಿ ಬೀರಿದೆ. ಕಾಂಗ್ರೆಸ್ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು ಕೊಂಡಿದೆ. ಇದರ ಅನುಸಾರ ಇನ್ನು ಮುಂದೆ 1 ಕೋಟಿ ರೂ. ಗೂ ಆದಾಯ ಮೀರಿದ ದೇವಸ್ಥಾನಗಳ ಆದಾಯದ ಶೇ.10 ರಷ್ಟು ಹಣವನ್ನು ಸರ್ಕಾರ ಬಾಚಿಕೊಳ್ಳಲಿದೆ. ಇದು ದರಿದ್ರತನವಲ್ಲದೇ ಬೇರೇನೂ ಅಲ್ಲ ಎಂದು ಕಿಡಿಕಾರಿದ್ದಾರೆ.
ದೇವರ ಅರಿಕೆ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಭಕ್ತರು ಸಮರ್ಪಿಸುವ ಕಾಣಿಕೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ಕೆ ಉಪಯೋಗವಾಗಬೇಕು. ಬದಲಾಗಿ ಅದು ಬೇರೊಂದು ಕಾರ್ಯಕ್ಕೆ ವಿನಿಯೋಗವಾದರೆ ಜನರ ದೈವ ನಂಬಿಕೆಗಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ವಂಚನೆ ಆಗುತ್ತದೆ. ಇತರ ಧರ್ಮಗಳ ಆದಾಯದ ಮೇಲಿಲ್ಲದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಮಾತ್ರ ಏಕೆ ಎಂಬುದು ಕೋಟಿ ಭಕ್ತರ ಪ್ರಶ್ನೆಯಾಗಿದೆ ಎಂದರು.
ಇನ್ನು ವಿಜಯೇಂದ್ರ ಟ್ವೀಟ್ ಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ರಾಮಲಿಂಗಾರೆಡ್ಡಿ ಅವರು, ವಿಜಯೇಂದ್ರ ಅವರೇ, ನೀವು ರಾಜಕೀಯ ಲಾಭಕ್ಕಾಗಿ ಕೇವಲ ಹಿಂದೂ ವಿರೋಧಿ ಧೋರಣೆ ಎಂದು ನಮ್ಮ ಸರ್ಕಾರವನ್ನು ದೂರುತ್ತಿದ್ದೀರಿ. ಒರಿಜಿನಲ್ ಹಿಂದೂಗಳು ನಾವು.. ಇಷ್ಟು ವರ್ಷ ದೇವಸ್ಥಾನಗಳನ್ನು, ಹಿಂದುಗಳನ್ನು ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.
ಈ ಬಾರಿ ಸಿಎಂ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ಮಂಡಿಸಿದ ಬಳಿಕ ದೇವಾಲಯದ ಆದಾಯವನ್ನು ಇತರೆ ಧರ್ಮಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ, ಅಧಿವೇಶನದಲ್ಲಿ, ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.