ನವದೆಹಲಿ, ಫೆ 22 (DajiworldNews/AA): ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ 7ನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದು, ಫೆಬ್ರವರಿ 26 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಈ ಹಿಂದೆ ಕೇಜ್ರಿವಾಲ್ ಅವರಿಗೆ 2023ರ ನವೆಂಬರ್ 2 ಹಾಗೂ ಡಿಸೆಂಬರ್ 21 ರಂದು ಮತ್ತು 2024ರ ಜನವರಿ 3, 18, ಫೆಬ್ರವರಿ 2, 14 ಹೀಗೆ 6 ಬಾರಿ ಇಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಕೇಜ್ರಿವಾಲ್ ಅವರು ಈ ಎಲ್ಲಾ ಸಮನ್ಸ್ ಗಳಿಗೂ ಹಾಜರಾಗದೇ ಗೈರಾಗಿರುತ್ತಾರೆ. ಇದೀಗ ಇಡಿ 7ನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದು, ಈ ಬಾರಿಯಾದರು ವಿಚಾರಣೆಗೆ ಹಾಜರಾಗುತ್ತಾರಾ ಎಂದು ಕಾದುನೋಡಬೇಕಿದೆ.
ಇನ್ನು ಈ ಎಲ್ಲಾ ಸಮನ್ಸ್ ಗಳು ಕಾನೂನುಬಾಹಿರ ಹಾಗೂ ರಾಜಕೀಯ ಪ್ರೇರಿತವಾಗಿದೆ. ಇದು ನಾನು ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯಲು ಮಾಡಿರುವ ಪಿತೂರಿ ಎಂದು ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ.