ಹಿಸಾರ್, ಫೆ 23(DaijiworldNews/AA): ಧರಣಿ ನಿರತ ರೈತರ ಮೇಲೆ ಹರ್ಯಾಣ ಪೊಲೀಸರು ಹಿಸಾರ್ ಜಿಲ್ಲೆಯ ಖೇಡಿ ಚೋಪ್ವಾದಲ್ಲಿ ಇಂದು ಅಶ್ರವಾಯು ಪ್ರಯೋಗ ಮಾಡಿದ್ದಾರೆ. ಜೊತೆಗೆ ರೈತ ಮುಖಂಡ ಸುರೇಶ್ ಕೋತ್ ಸೇರಿ ಹಲವಾರು ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್-ಹರ್ಯಾಣ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ಬೆಂಬಲಿಸಿ ಕಳೆದ ಐದು ದಿನಗಳಿಂದ ಖೇಡಿ ಚೋಪ್ವಾದಲ್ಲಿ ಧರಣಿ ಮಾಡುತ್ತಿದ್ದರು. ಮೂಲಗಳ ಪ್ರಕಾರ ’ದಿಲ್ಲಿ ಚಲೋ’ ಆಂದೋಲನವನ್ನು ಬೆಂಬಲಿಸಿ ಇಂದು ಪಂಜಾಬ್ ನ ಖಾನೌರಿ ಗಡಿಯತ್ತ ತೆರಳಲು ರೈತರು ಯೋಜಿಸಿದ್ದರು ಎನ್ನಲಾಗಿದೆ.
ಆದರೆ ಪೊಲೀಸರು ರೈತರನ್ನು ತಡೆಯಲು ಪ್ರಯತ್ನಿಸಿದ್ದು, ಈ ಸಂದರ್ಭ ಘರ್ಷಣೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪೊಲೀಸರು ಹಾಗೂ ಧರಣಿ ನಿರತ ರೈತರ ನಡುವೆ ಉಂಟಾದ ಘರ್ಷಣೆ ವೇಳೆ ಪೊಲೀಸರು ಗುಂಪು ಚದುರಿಸಲು ಅಶ್ರವಾಯು ಶೆಲ್ ಗಳನ್ನು ಹಾಗೂ ಜಲ ಪಿರಂಗಿಗಳನ್ನು ಉಪಯೋಗಿಸಿದ್ದಾರೆ. ಈ ವೇಳೆ ಧರಣಿ ನಿರತ ರೈತರು ಕಲ್ಲು ತೂರಾಟ ನಡೆಸಿದ್ದಾರೆ. ಈ ಕಲ್ಲು ತೂರಾಟದಿಂದಾಗಿ ಕೆಲ ರೈತರಿಗೆ ಗಾಯಗಳಾಗಿವೆ ಎನ್ನಲಾಗಿದೆ.