ಗುವಾಹಟಿ, ಫೆ 24(DaijiworldNews/AA): ಅಸ್ಸಾಂ 'ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ 1935' ಅನ್ನು ರದ್ದುಗೊಳಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಸ್ಸಾಂ ಸರ್ಕಾರ ನಿರ್ಧರಿಸಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸರ್ಕಾರ ಶತಮಾನಗಳಷ್ಟು ಹಳೆಯದಾದ ಈ ಕಾಯ್ದೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸುವ ನಿಟ್ಟಿನಲ್ಲಿ ಈ ಕಾಯ್ದೆ ರದ್ದುಗೊಳಿಸುತ್ತಿರುವುದು ಮಹತ್ವಪೂರ್ಣ ಬದಲಾವಣೆಯನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಕಾಯ್ದೆ ರದ್ದುಗೊಳಿಸುವ ಮೂಲಕ ಅಸ್ಸಾಂ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಏಕರೂಪ ನಾಗರಿಕ ಸಂಹಿತೆ ಜಾರಿ ನಿಟ್ಟಿನಲ್ಲಿ 'ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ 1935' ಅನ್ನು ರದ್ದುಗೊಳಿಸುತ್ತಿರುವುದು ಮೊದಲ ಕ್ರಮವಾಗಿರಬಹುದೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಯಂತ್ ಮಲ್ಲಬರುವ ಅವರು, ಏಕರೂಪ ನಾಗರಿಕ ಸಂಹಿತೆ ನಿಟ್ಟಿನಲ್ಲಿ ಮುಸ್ಲಿಂ ವಿವಾಹ ಕಾಯ್ದೆ ರದ್ದತಿ ನಿರ್ಧಾರವು ದೊಡ್ಡ ಹೆಜ್ಜೆ. ಇನ್ನು ಮುಂದೆ ರಾಜ್ಯದಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳ ನೋಂದಣಿಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನೋಂದಣಾಧಿಕಾರಿಗಳು ಮಾಡಲಿದ್ದಾರೆ. ಪ್ರಸ್ತುತ ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ 94 ಮುಸ್ಲಿಂ ರಿಜಿಸ್ಟ್ರಾರ್ಗಳನ್ನು ತೆಗೆದುಹಾಕಲಾಗುವುದು. ಅವರೆಲ್ಲರಿಗೂ ತಲಾ 2 ಲಕ್ಷ ರೂಪಾಯಿಗಳ ಒಂದು ಬಾರಿಯ ಪರಿಹಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.