ನವದೆಹಲಿ, ಫೆ 24(DaijiworldNews/AA): ಈ ಬಾರಿಯ ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ(ಎಎಪಿ) ಹಾಗೂ ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಅಂತಿಮವಾಗಿದೆ. ದೆಹಲಿ, ಗುಜರಾತ್, ಹರ್ಯಾಣ, ಗೋವಾ ಮತ್ತು ಚಂಡೀಗಢದಂತಹ ಇತರ ರಾಜ್ಯಗಳಿಗೆ ತಮ್ಮ ಸೀಟು ಹಂಚಿಕೆ ಒಪ್ಪಂದವನ್ನು ಘೋಷಣೆ ಮಾಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ಅವರು, ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ, ಕಾಂಗ್ರೆಸ್ ಪಕ್ಷ 3 ಕ್ಷೇತ್ರದಲ್ಲಿ ಹಾಗೂ ಎಎಪಿ 4 ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಇನ್ನು ಗುಜರಾತ್ ನ 26 ಲೋಕಸಭಾ ಕ್ಷೇತ್ರದಲ್ಲಿ 24 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ 2 ಕ್ಷೇತ್ರದಲ್ಲಿ ಎಎಪಿ ಸ್ಪರ್ಧಿಸಲಿದೆ. ಹರ್ಯಾಣದ 10 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ 9 ಕ್ಷೇತ್ರಗಳಲ್ಲಿ ಹಾಗೂ ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಎಎಪಿ ಸ್ಪರ್ಧಿಸಲಿದೆ. ಚಂಡೀಗಡ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿದೆ ಎಂದರು.
ಇನ್ನು ಪಂಜಾಬ್ ಗೆ ಯಾವುದೇ ಸೀಟು ಹಂಚಿಕೆ ಒಪ್ಪಂದ ಘೋಷಿಸಿಲ್ಲ. ಆದರೆ ಪಂಜಾಬ್ ನ ಎಲ್ಲಾ 13 ಲೋಕಸಭಾ ಕ್ಷೇತ್ರದಲ್ಲಿ ಎಎಪಿ ಸ್ಪರ್ಧಿಸುವುದಾಗಿ ಮೊದಲೇ ಹೇಳಿತ್ತು. ಈ ಎರಡೂ ಪಕ್ಷಗಳು ತಮ್ಮ ತಮ್ಮ ಚಿಹ್ನೆಯಲ್ಲೇ ಈ ಬಾರಿಯ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲಿವೆ. ಮೈತ್ರಿಗೆ ದೇಶ ಮುಖ್ಯ ಹಾಗೂ ಯಾವುದೇ ಪಕ್ಷವಲ್ಲ ಎಂದು ಅವರು ಹೇಳಿದ್ದಾರೆ.