ಶಿವಮೊಗ್ಗ, ಫೆ 24(DaijiworldNews/MS): ನಾವು ನುಡಿದಂತೆ ನಡೆದಿದ್ದೇವೆ. ನಮಗೂ ಮುನ್ನ ಅಧಿಕಾರದಲ್ಲಿದ್ದ ಬಿಜೆಪಿ, ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿತ್ತು. ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಇದೇ ನಮಗೂ ಬಿಜೆಪಿ ಅವರಿಗೂ ಇರುವ ವ್ಯತ್ಯಾಸ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ದೇವಾಲಯ ಯಾರ ಆಸ್ತಿಯೂ ಅಲ್ಲ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಬಿಜೆಪಿಯವರು ರಾಮ ಮಂದಿರ ವಿಚಾರವಾಗಿ ಪ್ರಚಾರ ಪಡೆಯುತ್ತಿದ್ದಾರೆ. ಅಯೋಧ್ಯೆಯಲ್ಲಿ ಮೊದಲು ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದೇ ರಾಜೀವ್ ಗಾಂಧಿ ಅವರು. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕೀಯ ಇರಬಾರದು ಎಂದು ಹೇಳಿದ್ದಾರೆ.
ಬಿಜೆಪಿ ಜನರಿಗಾಗಿ ಒಂದಾದರು ಯೋಜನೆ ಕೊಟ್ಟಿದೆಯೆ?
ಬಿಜೆಪಿ ಸ್ನೇಹಿತರೇ ನೀವು ನಾಲ್ಕು ವರ್ಷ ಅಧಿಕಾರ ನಡೆಸಿದ್ದೀರಿ. ಜನರ ಬದುಕು ಕಟ್ಟಿಕೊಡಲು ಯಾವುದಾದರೂ ಒಂದು ಯೋಜನೆ ನೀಡಿದ್ದೀರಾ? ಅದನ್ನು ಜನರಿಗೆ ತಿಳಿಸಿ. ಈ ಭಾಗದ ಶಾಸಕರಾದ ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದರು. ಅವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಅರಗ ಜ್ಞಾನೇಂದ್ರ 420 ಗ್ಯಾರಂಟಿ ಎಂದಿದ್ದಾರೆ. ಅರಗ ಜ್ಞಾನೇಂದ್ರ ನಿನಗೆ ಜ್ಞಾನ ಇದೆಯಾ? ನಿನಗೆ ಇರೋದು ಅರ್ಧ ಜ್ಞಾನ ಮಾತ್ರ.
ಅಲ್ಲಮ ಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಎರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನೂ ಮಾಡದೇ, ಅಧಿಕಾರ ಕಳೆದುಕೊಂಡ ನಂತರ ಈಗ ಮೋದಿ ಗ್ಯಾರಂಟಿ ಎಂದು ಅರಿಯುತ್ತೇನೆ ಎಂದರೆ ಏನು ಪ್ರಯೋಜನ? ನೀವು ಅಧಿಕಾರದಲ್ಲಿದ್ದಾಗ ಇಂತಹ ಒಂದು ಯೋಜನೆ ನೀಡಲಿಲ್ಲ.
ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದಾಗ ಒಂದು ಸೀರೆ, ಒಂದು ಸೈಕಲ್ ನೀಡಿದ್ದರು. ಅದನ್ನು ಬಿಟ್ಟರೆ ಬಿಜೆಪಿ ಬೇರೆ ಏನೂ ನೀಡಿಲ್ಲ. ಆ ಸೈಕಲ್ ಎಲ್ಲಿ ಹೋಯ್ತು. ಅದನ್ನು ಯಾಕೆ ನಿಲ್ಲಿಸಿದಿರಿ?
ನೀವು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದಿರಿ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದಿರಿ. ಹೇಳಿದಂತೆ ಮಾಡಿದಿರಾ? ಏನಿಲ್ಲ, ಏನಿಲ್ಲಾ. ಬಿಜೆಪಿ ನಾಯಕರು ಕೇವಲ ಖಾಲಿ ಮಾತಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ
ಅರ್ಚರ ರಕ್ಷಣೆ ಮಾಡುವ ಕಾಯ್ದೆಯನ್ನು ಬಿಜೆಪಿ- ಜೆಡಿಎಸ್ ಸೋಲಿಸಿದೆ:
ಅರ್ಚಕನ ಪ್ರಭಾವದಿಂದ ನಾವು ಶಿಲೆಯಲ್ಲೂ ಶಿವನನ್ನು ಕಾಣುತ್ತೇವೆ. ನಿನ್ನೆ ನಾವು ಒಂದು ಮಸೂದೆಯನ್ನು ಮಂಡಿಸಿದೆವು. ಅದರ ಮೂಲಕ ದೊಡ್ಡ ದೇವಾಲಯಗಳ ಆದಾಯದಲ್ಲಿ ಶೇ.10ರಷ್ಟು ಆದಾಯ ತೆಗೆದುಕೊಂಡು ಅದನ್ನು ಅರ್ಚಕರ ವೇತನ, ವಿಮೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂದಾಗಿದ್ದೆವು. ದೇವಾಲಯ, ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಹಾಗೂ ಜೆಡಿಎಸ್ ನವರು ಆ ಮಸೂದೆಯನ್ನು ಪರಿಷತ್ತಿನಲ್ಲಿ ಸೋಲಿಸಿದ್ದಾರೆ. ಇನ್ನು ಮೂರು ತಿಂಗಳಲ್ಲಿ ನಾವು ಮೇಲ್ಮನೆಯಲ್ಲಿ ಬಹುಮತ ಪಡೆಯುತ್ತೇವೆ. ಆಗ ನಮ್ಮ ಮಸೂದೆ ಜಾರಿಯಾಗುವಂತೆ ಮಾಡುತ್ತೇವೆ.
"ಜಾತಿ ವಿಚಾರ ಬಗ್ಗೆ ಯೋಚಿಸಬೇಡಿ" ಎಂದು ನಾರಾಯಣ ಗುರುಗಳು ನಮಗೆ ಸಂದೇಶ ನೀಡಿದರು. ಅದರಂತೆ ನಾವು ಜಾತಿಯನ್ನು ಬಿಟ್ಟು ನೀತಿ ಮೇಲೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅದಕ್ಕಾಗಿ ಬಜೆಟ್ ನಲ್ಲಿ 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ. ಬಿಜೆಪಿಯವರು ಇಂತಹ ಒಂದು ಕಾರ್ಯಕ್ರಮ ಹೆಸರಲ್ಲಿ ಮತ ಕೇಳಲು ಆಗುತ್ತದೆಯೇ? ನಮ್ಮದು 420 ಕಾರ್ಯಕ್ರಮವಾದರೆ ನಮ್ಮ ಯೋಜನೆಯಿಂದ ಪ್ರಯೋಜನ ಪಡೆಯಬೇಡಿ ಎಂದು ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರು ಜನರಿಗೆ ಕರೆ ನೀಡಲಿ ಎಂದು ಸವಾಲು ಹಾಕುತ್ತೇನೆ. ರಾಜ್ಯದ ಮಹಿಳೆಯರು ತಮ್ಮ ಮನೆಯಲ್ಲಿ ದೀಪ ಹಚ್ಚುವಾಗ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ. ಎಂದು ಹೇಳಿದ್ದಾರೆ.