ಬೆಂಗಳೂರು, ಫೆ 25(DaijiworldNews/MS): ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ (ಸಿಜೆ) ನಿಲಯ್ ವಿಪಿನ್ಚಂದ್ರ ಅಂಜಾರಿಯ ಅವರು ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಗೌಪ್ಯತಾ ಪ್ರಮಾಣವಚನ ಬೋಧಿಸಿದರು. ನ್ಯಾ.ನಿಲಯ್ ವಿ.ಅಂಜಾರಿಯ ಅವರನ್ನು ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಇತ್ತೀಚೆಗೆ ನೇಮಕ ಮಾಡಲಾಗಿತ್ತು.
ಅನಂತರ ಕಡತಗಳಿಗೆ ಸಹಿ ಹಾಕಿ ವಿಪಿನ್ ಚಂದ್ರ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಜ್ಯಪಾಲರು, ಮುಖ್ಯಮಂತ್ರಿಯಾಗಿಯಾಗಿ ಗಣ್ಯರು ನೂತನ ನ್ಯಾಯಮೂರ್ತಿಗಳಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಕಾರ್ಯಕ್ರಮ ನಿರೂಪಿಸಿದರು.