ಕೋಲ್ಕತ್ತಾ, ಫೆ 26 (DaijiworldNews/HR): ಮುಗ್ಧ ಮತ್ತು ಬಡ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಹಾಗೂ ಭೂಕಬಳಿಕೆ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪ್ರಭಾವಿ ನಾಯಕ ಶೇಖ್ ಷಹಜಹಾನ್ನನ್ನ ಬಂಧಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ನ್ಯಾಯಾಲಯವು ಪೊಲೀಸರ ಕೈಗಳನ್ನು ಕಟ್ಟಿಹಾಕಿದ ಕಾರಣ ಬಂಗಾಳ ಸರ್ಕಾರವು ಷಹಜಹಾನ್ನನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿದ ಒಂದು ದಿನದ ನಂತರ ಕೋಲ್ಕತ್ತಾ ಹೈಕೋರ್ಟ್ ಬಂಧನಕ್ಕೆ ಆದೇಶಿಸಿದೆ.
ಇನ್ನು ಲೈಂಗಿಕ ಕಿರುಕುಳ ಹಾಗೂ ಭೂಕಬಳಿಕೆ ಆರೋಪ ಹೊತ್ತಿರುವ ಪ್ರಮುಖ ಆರೋಪಿ ಶೇಖ್ ಷಹಜಹಾನ್ನನ್ನು ಬಂಧಿಸದಂತೆ ಬಂಗಾಳ ಪೊಲೀಸರಿಗೆ ಯಾರೂ ಹೇಳಿಲ್ಲ. ಯಾವುದೇ ಹಂತದಲ್ಲೂ ಬಂಧನಕ್ಕೆ ಅಡೆತಡೆ ಇಲ್ಲ. ಷಹಜಹಾನ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪಿ ಎಂದು ಹೆಸರಿಸಲಾಗಿದ್ದು, ಅವರನ್ನು ಬಂಧಿಸಬೇಕು ಎಂದು ಕೋರ್ಟ್ ಹೇಳಿದೆ.