ರಾಂಚಿ, ಫೆ 26(DaijiworldNews/AA): ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ನ ಪ್ರಮುಖ ಶಾಸಕರು, ಸಂಸದರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದೀಗ ಜಾರ್ಖಂಡ್ನ ಮಾಜಿ ಸಿಎಂ ಮಧು ಕೋಡ ಪತ್ನಿ, ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಸಿಂಗ್ಭೂಮ್ ಕ್ಷೇತ್ರದ ಕಾಂಗ್ರೆಸ್ ಸಂಸದೆಯಾದ ಗೀತಾ ಕೋಡಾ ಅವರು ರಾಂಚಿಯಲ್ಲಿನ ರಾಜ್ಯ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುವ ಮೂಲಕ ಈ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ದರಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಒಂದು ಪಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದೊಯ್ಯುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಒಂದು ಕುಟುಂಬವನ್ನ ಮಾತ್ರ ಮುಂದಕ್ಕೆ ಕರೆದೊಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ತಮಿಳುನಾಡಿನ ಶಾಸಕಿ ಎಸ್.ವಿಜಯಧರಣಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಸಂಸದೆ ಗೀತಾ ಕೋಡಾ ಅವರು ಕೂಡ ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇನ್ನು ಲೊಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನ ಅದೆಷ್ಟು ಶಾಸಕರು, ಸಂಸದರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಕಾದುನೋಡಬೇಕಿದೆ.